
ರದ್ದು ಪಡಿಸಲಾದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಎ ಬಳಕೆ ಮುಂದುವರೆಸಿರುವ ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದೆ.
ಈ ನಿಬಂಧನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಲಾಗಿದ್ದು ಇದರ ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ತಡೆ ನೀಡುವುದು ರಾಜ್ಯಗಳಿಗೆ ಬಿಟ್ಟದ್ದು ಎಂದು ಕೇಂದ್ರ ಸರ್ಕಾರ ನಿಲುವು ತಳೆದ ನಂತರ ನ್ಯಾಯಾಲಯ ರಾಜ್ಯಗಳ ಪ್ರತಿಕ್ರಿಯೆ ಕೇಳಿದೆ.
ಶ್ರೇಯಾ ಸಿಂಘಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸೆಕ್ಷನ್ 66 ಎ ಅನ್ನು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಾರ್ಚ್ 24, 2015 ರಂದು ಘೋಷಿಸಿತ್ತು. ಆದರೆ ಈ ಸೆಕ್ಷನ್ ಅಡಿ ಎಫ್ಐಆರ್ ನೋಂದಾಯಿಸದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಲಹೆ ನೀಡಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸರ್ಕಾರೇತರ ಸಂಸ್ಥೆ ಪಿಯುಸಿಎಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು
ವಕೀಲೆ ಅಪರ್ಣಾ ಭಟ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಸೆಕ್ಷನ್ 66 ಎ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ದೇಶದ ವಿಚಾರಣಾ ನ್ಯಾಯಾಲಯಗಳಲ್ಲೂ ಬಳಕೆಯಲ್ಲಿದೆ ಎಂದು ಸಂಸ್ಥೆ ಹೇಳಿತ್ತು. ಸೆಕ್ಷನ್ ರದ್ದುಪಡಿಸಲಾಗಿದ್ದರೂ ಅದರಡಿ ಪ್ರಕರಣ ದಾಖಲಾಗಿರುವುದಕ್ಕೆ ಸುಪ್ರೀಂಕೋರ್ಟ್ ಈ ಹಿಂದಿನ ವಿಚಾರಣೆ ವೇಳೆ ಆಘಾತ ವ್ಯಕ್ತಪಡಿಸಿತ್ತು. “ಅದ್ಭುತ! ಈಗ ನಡೆಯುತ್ತಿರುವ ಬೆಳವಣಿಗೆ ಭಯಾನಕವಾಗಿದೆ” ಎಂದು ಹೇಳಿದ್ದ ನ್ಯಾಯಾಲಯ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.
ಬಳಿಕ ಸೆಕ್ಷನ್‌ನಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದಾಖಲಿಸಿರುವ ಎಲ್ಲಾ ದೂರುಗಳನ್ನು ಹಿಂಪಡೆಯುವಂತೆ ಹಾಗೂ ಮುಂದೆ ಆ ಸೆಕ್ಷನ್ ಅಡಿ ಯಾರ ವಿರುದ್ಧವೂ ದೂರು ದಾಖಲಿಸದಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿತ್ತು.