
ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರ ಜುಲೈ 29ರಂದು ಬಿಡುಗಡೆಯಾಗುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ.
ಕೇಂದ್ರ ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಸಂಪರ್ಕಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.
"ಮೊದಲು ಹೈಕೋರ್ಟ್‌ಗೆ ಹೋಗಿ ವಿಚಾರಣೆಯಲ್ಲಿ ಪಾಲ್ಗೊಂಡು ನಂತರ ಇಲ್ಲಿಗೆ ಬನ್ನಿ. ಈಗ ಇನ್ನೊಂದು ಕಡೆಯ ಕಕ್ಷಿದಾರರು [ಚಲನಚಿತ್ರ ನಿರ್ಮಾಪಕ] ಕೇಂದ್ರ ಸರ್ಕಾರದ ಆದೇಶದಿಂದ ತೃಪ್ತರಾಗಿದ್ದು ಅವರು ಇಲ್ಲಿ ಪ್ರಕರಣವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ನೀವು ಈಗ ಹೈಕೋರ್ಟ್‌ಗೆ ಹೋಗಿ. ನಮ್ಮ ಸಮಯ ಏಕೆ ವ್ಯರ್ಥ ಮಾಡುತ್ತೀರಿ" ಎಂದು ನ್ಯಾಯಾಲಯ ಕಟುಶಬ್ದಗಳಲ್ಲಿ ನುಡಿಯಿತು.
ಚಿತ್ರದ ಬಿಡುಗಡೆಯ ಪರ ಮತ್ತು ವಿರುದ್ಧವಾಗಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಚಿತ್ರದ ಬಿಡುಗಡೆಗೆ ತಡೆ ನೀಡಿದ ಹಾಗೂ ಚಿತ್ರವನ್ನು ಮೊದಲು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಪರಿಶೀಲನೆ ಮುಂದುವರೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ನಂತರ ಸರ್ಕಾರ ನೇಮಿಸಿದ್ದ ಸಮಿತಿ ಕೆಲ ಬದಲಾವಣೆಗಳನ್ನು ಮಾಡಿ ಚಿತ್ರ ಬಿಡುಗಡೆಗೊಳಿಸಬಹುದು ಎಂದಿತ್ತು.
ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಮತ್ತು ಕನ್ಹಯ್ಯಾ ಲಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಜಾವೇದ್ ಚಿತ್ರದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಚಿತ್ರ ಬಿಡುಗಡೆಗೆ ಅವಕಾಶ ನೀಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಇದೀಗ ಪ್ರಶ್ನಿಸಲು ಪ್ರಯತ್ನಿಸಿದ್ದಾರೆ. ಮದನಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ , ಹೊಸ ಅನುಮತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಹೇಳಿದರು.
ಜಾವೇದ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಕೂಡ ಈ ಸವಾಲನ್ನು ಹೈಕೋರ್ಟ್‌ಗೆ ಕೊಂಡೊಯ್ಯಲು ಒಪ್ಪಿಕೊಂಡರು.