ಅಮೆಜಾನ್, ಫ್ಲಿಪ್‌ಕಾರ್ಟ್‌ ವಿರುದ್ಧದ ತಡೆಯಾಜ್ಞೆ ತೆರವು ಕೋರಿಕೆ: ಹೈಕೋರ್ಟ್‌ ಎಡತಾಕಲು ಸೂಚಿಸಿದ ಸುಪ್ರೀಂಕೋರ್ಟ್‌

ಆರು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಗಡುವು ವಿಧಿಸಿದೆ. ಹೈಕೋರ್ಟ್ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಸದ್ಯದ ಮನವಿಯನ್ನು ಮರುಪರಿಶೀಲಿಸಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
Amazon, Flipkart
Amazon, Flipkart

ಇ-ಕಾಮರ್ಸ್‌ ದೈತ್ಯ ಕಂಪೆನಿಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಹಾಗೂ ಮತ್ತಿತರರ ಸಂಸ್ಥೆಗಳ ವಿರುದ್ಧ ಕೇಳಿಬಂದಿದ್ದ ಸ್ಪರ್ಧಾ ವಿರೋಧಿ ಚಟುವಟಿಕೆಗಳ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು ಅರ್ಜಿದಾರರಾದ ಸಿಸಿಐಗೆ ಕರ್ನಾಟಕ ಹೈಕೋರ್ಟ್‌ ಸಂಪರ್ಕಿಸುವಂತೆ ಸೂಚಿಸಿದೆ. ಆಡಳಿತಾತ್ಮಕ ಕಾರಣಗಳಿಗಾಗಿ ತನಿಖೆಗೆ ಆದೇಶಿಸಲಾಗಿದ್ದು, ಅದು ಯಾರೊಬ್ಬರ ಸ್ವಾತಂತ್ರ್ಯ ಮತ್ತು ಹಕ್ಕಿಗೆ ಧಕ್ಕೆ ಉಂಟು ಮಾಡುವುದಿಲ್ಲ. ನಿರಂತರ ಮನವಿಗಳ ಹೊರತಾಗಿಯೂ ಹೈಕೋರ್ಟ್‌ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತುಕೊಳ್ಳಲಿಲ್ಲ ಎಂದು ಸಿಸಿಐ ಪರ ವಕೀಲ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ "ವಿಸ್ತೃತ ವಿಚಾರಗಳ" ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬಾಕಿ ಇರಿಸುವಂತೆ ಮೆಹ್ತಾ ಮನವಿ ಮಾಡಿದರು. ಹೈಕೋರ್ಟ್‌ನ ವಿಭಾಗೀಯ ಪೀಠವನ್ನು ಮೊದಲು ಸಂಪರ್ಕಿಸದೇ, 209 ದಿನಗಳು ತಡವಾದ ಬಳಿಕ ಸಿಸಿಐ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ ಎಂದು ಈ ವೇಳೆ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಗ್ವಿ ವಾದಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಹೈಕೋರ್ಟ್‌ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಸದ್ಯದ ಮನವಿಯನ್ನು ಮರುಪರಿಶೀಲಿಸಬಹುದು ಎಂದೂ ಪೀಠವು‌ ಹೇಳಿದೆ.

ಕಳೆದ ಜನವರಿಯಲ್ಲಿ ಸ್ಪರ್ಧಾ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಇ-ಕಾಮರ್ಸ್‌ ದೈತ್ಯ ಸಂಸ್ಥೆಯಾದ ಅಮೆಜಾನ್‌ ವಿರುದ್ಧ ತನಿಖೆಗೆ ಸಿಸಿಐ ಆದೇಶಿಸಿತ್ತು. ಇದಕ್ಕೆ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ಮಧ್ಯಂತರ‌ ತಡೆಯಾಜ್ಞೆ ನೀಡಿತ್ತು. ಅಮೆಜಾನ್‌ ಹಾದಿ ಅನುಸರಿಸಿದ್ದ ಫ್ಲಿಪ್‌ಕಾರ್ಟ್‌ ತನ್ನ ವಿರುದ್ಧ ತನಿಖೆಗೆ ಒಪ್ಪಿಗೆ ನೀಡಿರುವ ಸಿಸಿಐ ಆದೇಶವನ್ನು ವಜಾಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿತ್ತು.

Also Read
ಸಾಮಾಜಿಕ ಜಾಲತಾಣದಲ್ಲಿ ಅನೈತಿಕ ವಿಷಯ, ಸೇಡಿನ ಅಶ್ಲೀಲತೆಯ ಪ್ರಸರಣ ಪ್ರಶ್ನಿಸಿ ಪಿಐಎಲ್: ನೋಟಿಸ್ ನೀಡಿದ ‘ಸುಪ್ರೀಂ’

ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸ್ಮಾರ್ಟ್‌ಫೋನ್‌ ಉತ್ಪಾದಕರು ಮತ್ತು ಎರಡು ಇ-ಕಾಮರ್ಸ್‌ ಸಂಸ್ಥೆಗಳ ನಡುವೆ ವಿಶೇಷ ಒಪ್ಪಂದವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜನವರಿ 13ರಂದು ಹೊರಡಿಸಿದ್ದ ಆದೇಶದಲ್ಲಿ ಸಿಸಿಐ ವಿವರಿಸಿದ್ದು, ಹೀಗೆ ಹೇಳಿತ್ತು:

“ಕೆಲವು ಮಾರಾಟಗಾರಿಗೆ ವಿಶೇಷ ಮಾರುಕಟ್ಟೆಯ ಜೊತೆಗೆ ಆದ್ಯತೆಯ ಉಪಚಾರ ಕಲ್ಪಿಸುವುದು ಮತ್ತು ರಿಯಾಯಿತಿ ಘೋಷಿಸುವ ಅಭ್ಯಾಸಗಳು ಸ್ಪರ್ಧೆಯ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗುವ ವಾತಾವರಣ ಸೃಷ್ಟಿಸಬಹುದು” ಎಂದಿತ್ತು.

Related Stories

No stories found.
Kannada Bar & Bench
kannada.barandbench.com