ಚೆನ್ನೈನಲ್ಲಿ ಸುಪ್ರೀಂ ಪೀಠ ಸ್ಥಾಪಿಸಿ, ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಭಾಷೆಯಾಗಲಿ ತಮಿಳು: ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈನ ನೂತನ ನ್ಯಾಯಾಲಯ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮಾತನಾಡಿದರು.
Madras HC and MK Stalin
Madras HC and MK Stalin

ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ನ ಪ್ರಾದೇಶಿಕ ಪೀಠ ಸ್ಥಾಪಿಸಬೇಕು, ತಮಿಳು ಭಾಷೆಯನ್ನು ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ ಆವರಣದ ಎರಡು ಹೊಸ ಕಟ್ಟಡಗಳು ಸೇರಿದಂತೆ ಚೆನ್ನೈನಲ್ಲಿ ಅಧೀನ ನ್ಯಾಯಾಲಯ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮಾತನಾಡಿದರು.

“ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ ಪ್ರಾದೇಶಿಕ ಪೀಠ ಸ್ಥಾಪಿಸಬೇಕು ಮತ್ತು ತಮಿಳು ಭಾಷೆಯನ್ನು ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಭಾಷೆಯನ್ನಾಗಿ ಮಾಡಲು ಅನುಮತಿಸಬೇಕು ಎಂದು ಗೌರವಾನ್ವಿತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಕೇಳಿಕೊಳ್ಳುತ್ತೇನೆ” ಎಂಬುದಾಗಿ ಅವರು ತಿಳಿಸಿದರು.

Also Read
ಪ್ರಾದೇಶಿಕ ಪೀಠಗಳು ಸ್ಥಾಪನೆಯಾಗುವವರೆಗೆ ವರ್ಚುವಲ್ ವಿಚಾರಣೆ ಮುಂದುವರೆಸಲು ಸುಪ್ರೀಂಗೆ ಹಿರಿಯ ವಕೀಲ ವಿಲ್ಸನ್ ಮನವಿ

ಈ ಸಂದರ್ಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ “ನ್ಯಾಯಾಲಯ ಕಟ್ಟಡಗಳು ಹಾರ್ಡ್‌ವೇರ್‌ಗಳಾದರೆ ವಕೀಲರು ಮತ್ತು ನ್ಯಾಯಾಧೀಶರು ನ್ಯಾಯಾಂಗದ ಸಾಫ್ಟ್‌ವೇರ್‌ಗಳಿದ್ದಂತೆ. ಹೀಗಾಗಿ ಪ್ರಕರಣಗಳ ಬಾಕಿ ಕಡಿಮೆ ಮಾಡಲು ನ್ಯಾಯಾಧೀಶರು ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು. ಅಲ್ಲದೆ ನ್ಯಾಯಾಧೀಶರು ನೀಡುವ ತೀರ್ಪು ಸಂಕ್ಷಿಪ್ತವಾಗಿ ಮತ್ತು ಸ್ಫುಟವಾಗಿರಬೇಕು ಎಂದು ಅವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಇತ್ತೀಚೆಗೆ ರಾಜ್ಯದಲ್ಲಿ ನ್ಯಾಯಾಂಗ ಮೂಲಸೌಕರ್ಯಕ್ಕಾಗಿ ₹500 ಕೋಟಿ ಮಂಜೂರು ಮಾಡಿದ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ಭಂಡಾರಿ ಮತ್ತಿತರ ನ್ಯಾಯಮೂರ್ತಿಗಳು ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ರಾಜ್ಯ ಕಾನೂನು ಸಚಿವರಾದ ಎಸ್ ರಘುಪತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com