
ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಏಪ್ರಿಲ್ 16 ರಂದು ವಕ್ಫ್ (ತಿದ್ದುಪಡಿ) ಕಾಯಿದೆಯನ್ನು ಪ್ರಶ್ನಿಸಿರುವ ಹತ್ತು ಅರ್ಜಿಗಳ ವಿಚಾರಣೆ ನಡೆಸಲಿದೆ.
ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರಿರುವ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
ಇತ್ತೀಚಿನ ವರದಿಗಳ ಪ್ರಕಾರ ಕಾಯಿದೆ ಪ್ರಶ್ನಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಾನೂನಾತ್ಮಕ ಆಡಳಿತ ಹಾಗೂ ಸಮಾನ ಪೌರತ್ವದ, ಸಾಂವಿಧಾನಿಕ ಕಡ್ಡಾಯ ಬುನಾದಿ ಎನಿಸಿರುವ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ವಕ್ಫ್ ಕಾಯಿದೆ ಗಾಳಿಗೆ ತೂರಿದೆ ಎಂದು ಅವರು ದೂರಿದ್ದಾರೆ.
ಪ್ರಕರಣದ ಪ್ರಮುಖ ಅರ್ಜಿಯನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಅಸಾದುದ್ದೀನ್ ಓವೈಸಿ ಸಲ್ಲಿಸಿದ್ದಾರೆ . ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಬೇರೆ ಬೇರೆ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಹತ್ತು ಅರ್ಜಿಗಳನ್ನು ಸಲ್ಲಿಸಿವೆ.
ವಕ್ಫ್ (ತಿದ್ದುಪಡಿ) ಮಸೂದೆ- 2025 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಚೆಗೆ ಅಂಕಿತ ಹಾಕಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ಕ್ರಮವಾಗಿ ಏಪ್ರಿಲ್ 3 ಮತ್ತು 4ರಂದು ಮಸೂದೆ ಅಂಗೀಕರಿಸಿದ್ದವು.