
ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ್ ವಿಜಯ್ ಶಾ ನೀಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.
ಕರ್ನಲ್ ಕುರೇಷಿ ಅವರ ವಿರುದ್ಧ ಗಟಾರದ ಭಾಷೆ ಪ್ರಯೋಗಿಸಿದ ಶಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ನಿನ್ನೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಶಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸೀಹ್ ಅವರಿದ್ದ ಪೀಠವು ಶಾ ಸಚಿವರಾಗಿದ್ದಾರೆ ಎನ್ನುವುದನ್ನು ಗಮನಿಸಿದರೆ ಅವರ ಹೇಳಿಕೆಗಳು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿವೆ ಎಂದು ಹೇಳಿದೆ.
ದೇಶ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ಸಚಿವರಾಗಿರುವ ಕಾರಣಕ್ಕಾದರೂ ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಅವರಿಗೆ ತಿಳಿದಿರಬೇಕಿತ್ತು ಎಂದು ಸಿಜೆಐ ಗವಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶದಂತೆ ಶಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಬೇಕೆಂದು ಶಾ ಪರ ವಾದ ಮಂಡಿಸಿದ ಹಿರಿಯ ವಕೀಲೆ ವಿಭಾ ದತ್ತ ಮಖಿಜಾ ಕೋರಿದರು. "ಶಾ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರನ್ನು ತಪ್ಪಾಗಿ ಭಾವಿಸಲಾಗಿದೆ... ಮಾಧ್ಯಮಗಳು ಇದನ್ನು ವೈಭವೀಕರಿಸಿವೆ. ಎಫ್‌ಐಆರ್‌ಗೆ ತಡೆ ನೀಡಬೇಕು" ಎಂದು ಅವರು ಕೋರಿದರು.
ಆದರೆ, ಈ ಹಂತದಲ್ಲಿ ಎಫ್‌ಐಆರ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಬದಲಿಗೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿರುವುದಾಗಿ ಹೈಕೋರ್ಟ್‌ಗೆ ತಿಳಿಸುವಂತೆ ಸೂಚಿಸಿತು.
“ನಾವಿದನ್ನು ನಾಳೆ ಆಲಿಸುತ್ತೇವೆ. ನೀವು ಏನೆಂದು ನಿಮಗೆ ತಿಳಿದಿದೆ. ನೀವು ಸಚಿವರಾಗಿದ್ದ ಮಾತ್ರಕ್ಕೆ ಏನೂ ಆಗುವುದಿಲ್ಲ ಎಂದು ನಮಗೆ ತಿಳಿದಿದೆ” ಎಂದು ಪೀಠ ಶಾ ಅವರನ್ನುದ್ದೇಶಿಸಿ ಹೇಳಿತು.
ಪಾಕಿಸ್ತಾನದ ವಿರುದ್ಧ ಭಾರತ ಇತ್ತೀಚೆಗೆ ನಡೆಸಿದ ಗಡಿಯಾಚೆಗಿನ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸೇನಾ ಅಧಿಕಾರಿಗಳಲ್ಲಿ ಕರ್ನಲ್ ಕುರೇಷಿ ಒಬ್ಬರು. ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಶಾ ಬಣ್ಣಿಸಿದ್ದರು.