ಯುಎಪಿಎ, ಮೋಕಾ ಪ್ರಕರಣಗಳ ಪ್ರತ್ಯೇಕ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸುಪ್ರೀಂ ಸಲಹೆ

ಈ ಕಾಯಿದೆಗಳಡಿಯ ಪ್ರಕರಣಗಳ ವಿಳಂಬ ತಡೆಯುವ ಮಾರ್ಗ ಪರಿಶೀಲಿಸಿದ ನ್ಯಾಯಾಲಯ ಅಂತಹ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳಿಗೆ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳನ್ನು ವಹಿಸಬಾರದು ಎಂದು ಕಿವಿಮಾತು ಹೇಳಿತು.
Supreme Court
Supreme Court
Published on

ದೇಶಾದ್ಯಂತ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಗ್ರಹ ಕಾಯಿದೆ (ಎಂಸಿಒಸಿಎ- ಮೋಕಾ) ರೀತಿಯ ವಿಶೇಷ ಕಾಯಿದೆಗಳ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ [ಕೈಲಾಶ್ ರಾಮಚಂದನಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಈ ಕಾಯಿದೆಗಳಡಿಯ ಪ್ರಕರಣಗಳು ಬಾಕಿ ಉಳಿಯುವುದನ್ನು ಕಡಿಮೆ ಮಾಡುವ ವಿಧಾನ ಎಂದರೆ ಅಂತಹ ಪ್ರಕರಣಗಳ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿದ್ದು ಆ ನ್ಯಾಯಾಲಯಗಳಿಗೆ ಉಳಿದ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳನ್ನು ವಹಿಸಬಾರದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಎನ್‌ ಕೆ ಸಿಂಗ್‌ ಅವರಿದ್ದ ಪೀಠ ಕಿವಿಮಾತು ಹೇಳಿತು.

Also Read
[ಯುಎಪಿಎ ಪ್ರಕರಣ] ಮಾವೋವಾದಿ ಸಂಘಟನೆಗೆ ನಿಧಿ ಸಂಗ್ರಹದ ಆರೋಪ: ಅನಿರುದ್ಧ್‌ ರಾಜನ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

“ದೇಶದ ವಿವಿಧ ಭಾಗಗಳಲ್ಲಿ ಯುಎಪಿಎ ಎಂಸಿಒಸಿಎ- ಮೋಕಾ ರೀತಿಯ ಕಾಯಿದೆಗಳಡಿಯಲ್ಲಿ ನೂರಾರು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. ಎನ್ಐಎಗೆ ವಹಿಸಲಾಗಿರುವ ಪ್ರಕರಣಗಳು ಪ್ರಾಥಮಿಕವಾಗಿ ಘೋರ ಅಪರಾಧಗಳಿಗೆ ಸಂಬಂಧಿಸಿವೆ. ವಿಶೇಷ ಕಾಯಿದೆಗಳಡಿ ವಿಚಾರಣೆಗೆ ಮೀಸಲಾದ ನ್ಯಾಯಾಲಯಗಳ ಸ್ಥಾಪನೆ ಮಾತ್ರವೇ ಇದಕ್ಕೆ ಪರಿಹಾರ” ಎಂದು ನ್ಯಾಯಾಲಯ ಹೇಳಿತು.

ನಕ್ಸಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 2019ರ ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ವ್ಯಕ್ತಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರಗಳನ್ನು ತಿಳಿಸಿತು. ತಮ್ಮ ವಿರುದ್ಧದ ವಿಚಾರಣೆಯಲ್ಲಿ ಗಣನೀಯ ವಿಳಂಬವಾಗಿದೆ ಎಂದು ತಿಳಿಸಿದ್ದ ಅವರು ಜಾಮೀನು ಕೋರಿದ್ದರು.

ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಪ್ರಕರಣ ವಿಳಂಬವಾಗಿರುವ ಬಗ್ಗೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಂಗ ಮೂಲಸೌಕರ್ಯದ ಕೊರತೆ ಅಥವಾ ಆಡಳಿತಾತ್ಮಕ ಅದಕ್ಷತೆಯ ಕಾರಣಕ್ಕೆ ತನ್ನ ಕಕ್ಷಿದಾರನನನ್ನು ಈ ರೀತಿ ದೀರ್ಘಕಾಲ ಜೈಲಿನಲ್ಲಿಡುವಂತಿಲ್ಲ. ಕಳೆದ ಐದು ವರ್ಷ, ಹತ್ತು ತಿಂಗಳುಗಳಲ್ಲಿ ಒಬ್ಬ ಸಾಕ್ಷಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಅವರು ಗಮನ ಸೆಳೆದಿದ್ದರು.

Also Read
ʼಮೋಕಾʼ ಕಾಯಿದೆ ಬಳಸಲು ಹಿಂಸಾಚಾರ ನಡೆದಿರಲೇಬೇಕು ಎಂದೇನೂ ಇಲ್ಲ: ಸುಪ್ರೀಂ ಕೋರ್ಟ್

ದೇಶದ ವಿವಿಧ ಭಾಗಗಳಲ್ಲಿ ಇಂತಹ ನೂರಾರು ವಿಚಾರಣೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ʼಪ್ರಸ್ತುತ ಪ್ರಕರಣ ಅಸಾಧಾರಣವಾದದ್ದಲ್ಲ' ಎಂದು ಸುಪ್ರೀಂ ಕೋರ್ಟ್‌ ಅವಲೋಕಿಸಿತು. ಯುಎಪಿಎ ಮತ್ತು ಮೋಕಾ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಸ್ಥಾಪಿಸಲಾದ ನ್ಯಾಯಾಲಯಗಳು ಇಂತಹ ಪ್ರಕರಣಗಳನ್ನು ನಿಭಾಯಿಸುವ ಅಗತ್ಯವಿದೆ ಎಂದು ಅದು ಹೇಳಿತು.

ಆದರೂ ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್‌ ಈ ಪ್ರಕ್ರಿಯೆಯನ್ನು ಪ್ರತಿ ರಾಜ್ಯದ ಆಯಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 18ರಂದು ನಡೆಯಲಿದೆ.

Kannada Bar & Bench
kannada.barandbench.com