ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯ (ಎಂಸಿಒಸಿಎ- ಮೋಕಾ) ನಿಯಮಾವಳಿಗಳನ್ನು ಜಾರಿಗೆ ತರಲು ಹಿಂಸಾಚಾರ ಘಟಿಸಿರಲೇಬೇಕು ಎಂದೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ [ಅಭಿಷೇಕ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಮೋಕಾ ಕಾಯಿದೆ ಪ್ರಕಾರ ಹಿಂಸಾಚಾರದ ಬೆದರಿಕೆ ಒಡ್ಡುವುದು, ಭಯ ಹುಟ್ಟಿಸುವುದು, ಇಲ್ಲವೇ ಒತ್ತಡ ಹಾಕುವುದು ಕೂಡ ʼಸಂಘಟಿತ ಅಪರಾಧʼ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ. ಇದಲ್ಲದೆ ಇನ್ನಾವುದೇ ಕಾನೂನುಬಾಹಿರ ಮಾರ್ಗ ಕೂಡ ಇಂಥದ್ದೇ ದುಷ್ಕೃತ್ಯದ ವ್ಯಾಪ್ತಿಗೆ ಬರುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ
ಸುಲಿಗೆ, ಅಪಹರಣ ಮತ್ತಿತರ ಹಿಂಸಾಚಾರ ಕೃತ್ಯಗಳಲ್ಲಿ ತೊಡಗಿಕೊಂಡ ಆರೋಪದಡಿ ಅಭಿಷೇಕ್ ಎಂಬಾತನ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನ್ನ ವಿರುದ್ಧ ಮೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ಬಾಂಬೆ ಹೈಕೋರ್ಟ್ ನಾಗಪುರ ಪೀಠ ವಜಾಗೊಳಿಸಿತ್ತು.
ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಆತ ಅಧಿಕಾರಿಗಳು ತಪ್ಪಾಗಿ ತನ್ನ ವಿರುದ್ಧ ʼಮೋಕಾʼ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವಾದಿಸಿದ್ದ. ಆತನ ವಾದಸರಣಿಯನ್ನು ಒಪ್ಪದ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: