ಜಿಎಸ್‌ಟಿ ಪ್ರಕರಣದಲ್ಲಿ ರಿತು ಮಿನೋಚಾಗೆ ಮಂಜೂರು ಮಾಡಿದ್ದ ಮಧ್ಯಂತರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಕರ್ನಾಟಕ ಹೈಕೋರ್ಟ್ ಪರಿಹಾರ ನೀಡಿದ ರೀತಿ ಮತ್ತು ಕಾಲಮಿತಿಯ ಔಚಿತ್ಯದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ನ್ಯಾಯಾಲಯ ಹೇಳಿದೆ.
Supreme Court of India
Supreme Court of India
Published on

ಹಲವು ನಕಲಿ ಕಂಪನಿಗಳ ಮೂಲಕ ವ್ಯವಹಾರ ನಡೆಸಿ ಕೇಂದ್ರಕ್ಕೆ ₹665 ಕೋಟಿ ತೆರಿಗೆ ವಂಚಿಸಿದ್ದಾರೆ ಎಂಬ ಮುಂಬೈನ ಝೆಕ್ರೋಮ್‌ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಮಾಜಿ ನಿರ್ದೇಶಕಿ ರಿತು ನಿತಿನ್‌ ಮಿನೋಚಾಗೆ ಕರ್ನಾಟಕ ಹೈಕೋರ್ಟ್‌ ಮಂಜೂರು ಮಾಡಿದ್ದ ಮಧ್ಯಂತರ ಜಾಮೀನನ್ನು ಮಂಗಳವಾರ ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್‌ ಅಮನುಲ್ಲಾ ಮತ್ತು ಎಸ್‌ ವಿ ಎನ್‌ ಭಟ್ಟಿ ಅವರ ವಿಭಾಗೀಯ ಪೀಠವು ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ವಾಸ್ತವಿಕ ಅಂಶಗಳನ್ನು ಬದಿಗೊತ್ತಿ, ಜಾಮೀನು ಮಂಜೂರು ಮಾಡಿರುವುದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ನ್ಯಾಯಾಲಯ ಹೇಳಿದೆ.

Justices Ahsanuddin Amanullah and SVN Bhatti
Justices Ahsanuddin Amanullah and SVN Bhatti

“ಹೈಕೋರ್ಟ್‌ನಲ್ಲಿ ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ನಡೆದಿರುವ ಬೆಳವಣಿಗೆ ಮತ್ತು ರೀತಿಯನ್ನು ನೋಡಿದರೆ (ನಾವು) ಮಧ್ಯಪ್ರವೇಶಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

“ಪ್ರಕರಣದ ಮೆರಿಟ್‌ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಮಧ್ಯಂತರ ಆದೇಶ ಬದಿಗೆ ಸರಿಸಲಾಗಿದೆ” ಎಂದ ನ್ಯಾಯಾಲಯವು ಒಂದು ವಾರದಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಶರಣಾಗುವಂತೆ ಮಿನೋಚಾ ಅವರಿಗೆ ಆದೇಶಿಸಿತು.

ಜಿಎಸ್‌ಟಿ ಇಲಾಖೆ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌ ಅವರು “ಜನವರಿ 21 ಮತ್ತು 23ರಂದು ಮಿನೋಚಾ ಅವರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಜನವರಿ 24ರಂದು ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅದರ ಮಾರನೇಯ ದಿನವೇ ಪಟ್ಟಿಯಲ್ಲಿ ಮೊದಲ ಅರ್ಜಿಯಾಗಿ ವಿಚಾರಣೆಗೆ ಪಟ್ಟಿಯಾಗಿತ್ತು. ಪ್ರಕರಣವು ವಿಶೇಷ ನ್ಯಾಯಾಲಯದ ಪರಿಗಣನೆಯಲ್ಲಿತ್ತು ಎಂಬ ಅಂಶವನ್ನು ಹೈಕೋರ್ಟ್‌ ಗಮನಕ್ಕೆ ತರಲಾಗಿರಲಿಲ್ಲ” ಎಂದರು.

ಮಿನೋಚಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು “ಮಿನೋಚಾ ಮಹಿಳೆಯಾಗಿದ್ದು, ಮಗಳನ್ನು ನೋಡಿಕೊಳ್ಳಬೇಕಿದೆ. ಮಿನೋಚಾ ನಿರ್ದೇಶಕಿಯಾಗಿರುವ ಕಂಪನಿಯಲ್ಲಿ ₹5 ಕೋಟಿ ತೆರಿಗೆ ವಂಚನೆ ಮಾತ್ರ ಆಗಿದೆ. ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 132 ಸಂಜ್ಞೇತರ ಅಪರಾಧವಾಗಿದ್ದು, ಅದು ಕಸ್ಟಡಿಯ ವಶವನ್ನು ಸಮರ್ಥಿಸುವುದಿಲ್ಲ” ಎಂದರು.

ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶಕರು ಮತ್ತು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿಯ ಪರವಾಗಿ ವಾದಿಸಲು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವೆಂಕಟರಾಮನ್‌ ಅವರಿಗೆ ಹಿರಿಯ ಸ್ಟ್ಯಾಂಡಿಂಗ್‌ ವಕೀಲರಾದ ಮಧು ಎನ್‌.ರಾವ್‌ ನೆರವಾದರು.

Kannada Bar & Bench
kannada.barandbench.com