ವಿವಾದಾತ್ಮಕ ಭಾಷಣ: ನ್ಯಾ. ಎಸ್‌ ಕೆ ಯಾದವ್‌ಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಎಚ್ಚರಿಕೆ

ನ್ಯಾ. ಯಾದವ್ ಅವರಿಗೆ ಕಿವಿಮಾತು ಹೇಳಿದ ಕೊಲಿಜಿಯಂ, ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯ ಘನತೆ ಕಾಪಾಡುವಂತೆ ತಿಳಿಸಿದೆ ಎಂಬುದಾಗಿ ವರದಿಯಾಗಿದೆ.
Justice Shekhar Kumar Yadav, Supreme court
Justice Shekhar Kumar Yadav, Supreme court
Published on

ಮುಸ್ಲಿಂ ಸಮುದಾಯದ ವಿರುದ್ಧ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್‌ ಕೆ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ನ್ಯಾ. ಯಾದವ್‌ ಅವರಿಗೆ ಕಿವಿಮಾತು ಹೇಳಿದ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಬಿ ಆರ್ ಗವಾಯಿ, ಹೃಷಿಕೇಶ್ ರಾಯ್ ಹಾಗೂ ಎ ಎಸ್ ಓಕಾ ಅವರನ್ನೊಳಗೊಂಡ ಕೊಲಿಜಿಯಂ, ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯ ಘನತೆ ಕಾಪಾಡುವಂತೆ ತಿಳಿಸಿದೆ ಎಂಬುದಾಗಿ ವರದಿಯಾಗಿದೆ.

Also Read
ನ್ಯಾ. ಯಾದವ್‌ ಅವರಿಗೆ ವಾಗ್ದಂಡನೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

ಹಿಂದೂ ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಡಿಸೆಂಬರ್ 8ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಯಾದವ್‌ ಅವರು ಮಾಡಿದ್ದ ಭಾಷಣ ವಿವಾದ ಸೃಷ್ಟಿಸಿತ್ತು.

ಏಕರೂಪ ನಾಗರಿಕ ಸಂಹಿತೆ ಕುರಿತಂತೆ ನೀಡಿದ್ದ ಉಪನ್ಯಾಸದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್‌ಮುಲ್ಲಾ ಎಂಬ ಪದ ಕೂಡ ಬಳಸಿದ್ದರು.

ನಂತರ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರಿಗೆ ಸಮನ್ಸ್ ನೀಡಿತ್ತು. ಸೋಮವಾರ ಸಂಜೆ ನ್ಯಾ. ಯಾದವ್‌ ಅವರು ಕೊಲಿಜಿಯಂ ಎದುರು ಹಾಜರಾಗಿ ತಮ್ಮ ನಿಲುವನ್ನು ವಿವರಿಸಿದರು. ವಿವಾದ ಸೃಷ್ಟಿಸಲೆಂದು ತಮ್ಮ ಭಾಷಣದ ಆಯ್ದ ಭಾಗವನ್ನಷ್ಟೇ ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ನ್ಯಾ. ಯಾದವ್‌ ಹೇಳಿರುವುದು ವರದಿಯಾಗಿದೆ.

Also Read
ನ್ಯಾ. ಶೇಖರ್‌ ಕುಮಾರ್‌ ಯಾದವ್‌ ವಿರುದ್ಧ ವಾಗ್ದಂಡನಾ ನಿರ್ಣಯಕ್ಕೆ ಮುಂದಾದ ಸಿಬಲ್‌ ನೇತೃತ್ವದ ಸಂಸದರು

 ಅವರ ವಿವರಣೆಗಳಿಗೆ ತೃಪ್ತರಾಗದ ಕೊಲಿಜಿಯಂ ನ್ಯಾಯಾಲಯದ ಒಳಗೆ ಮತ್ತು ಹೊರಗೆ ನ್ಯಾಯಾಧೀಶರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದ್ದು ಜನ ನ್ಯಾಯಾಂಗದಲ್ಲಿ ಇರಿಸಿದ ನಂಬಿಕೆ ಮುಕ್ಕಾಗದಂತೆ ಅವರು ನೀಡುವ ಪ್ರತಿ ಹೇಳಿಕೆಯೂ ಅವರ ಸ್ಥಾನದ ಘನತೆಗೆ ತಕ್ಕನಾಗಿರಬೇಕು ಎಂದು ಬುದ್ಧಿವಾದ ಹೇಳಿದೆ.

ಮತ್ತೊಂದೆಡೆ ಹಾಲಿ ನ್ಯಾಯಮೂರ್ತಿ ಯಾದವ್‌ ಅವರಿಗೆ ವಾಗ್ದಂಡನೆ ವಿಧಿಸಿ ನ್ಯಾಯಾಂಗ ಕಾರ್ಯಗಳಿಂದ ಅವರನ್ನು ವಿಮುಖರನ್ನಾಗಿಸಬೇಕೆಂಬ ಕೂಗೂ ಎದ್ದಿದೆ. ಕಪಿಲ್‌ ಸಿಬಲ್‌ ನೇತೃತ್ವದ ಸಂಸದರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಅವರಿಗೆ ವಾಗ್ದಂಡನೆ ನಿರ್ಣಯ ಕುರಿತು ಪ್ರಸ್ತಾವನೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 55 ಸಂಸದರು ಸಹಿ ಹಾಕಿರುವ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ.

Kannada Bar & Bench
kannada.barandbench.com