ಮುಂದಿನ ಮೇ ತಿಂಗಳವರೆಗೆ ಸಿಜೆಐ ನೇತೃತ್ವದ ಸುಪ್ರೀಂ ಕೋರ್ಟ್‌ ಕೊಲಿಜಿಯಂನಲ್ಲಿ ಐವರ ಬದಲಿಗೆ ಆರು ನ್ಯಾಯಮೂರ್ತಿಗಳು

ನ್ಯಾ. ಚಂದ್ರಚೂಡ್‌ ಅವರ ಉತ್ತರಾಧಿಕಾರಿ ನ್ಯಾ. ಸಂಜೀವ್‌ ಖನ್ನಾ ಅವರಿಗೆ ಕೊಲಿಜಿಯಂನಲ್ಲಿ ಅವಕಾಶ ಕಲ್ಪಿಸುವ ಸಲುವಾಗಿ ಹಾಲಿ ನಾಲ್ವರು ನ್ಯಾಯಮೂರ್ತಿಗಳಲ್ಲಿ ನ್ಯಾ. ಖನ್ನಾ ಅವರು ಹಿರಿಯರಾಗಿಲ್ಲವಾದರೂ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
CJI DY Chandrachud, Justices Sanjay Kishan Kaul, S Abdul Nazeer, KM Joseph, MR Shah and  Khanna
CJI DY Chandrachud, Justices Sanjay Kishan Kaul, S Abdul Nazeer, KM Joseph, MR Shah and KhannaADMIN

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮುಂದಿನ ಆರು ತಿಂಗಳವರೆಗೆ ವಾಡಿಕೆಯ ಐವರು ಸದಸ್ಯರ ಬದಲಿಗೆ ಆರು ನ್ಯಾಯಮೂರ್ತಿಗಳನ್ನು ಒಳಗೊಳ್ಳಲಿದೆ.

ಸಿಜೆಐ ಹೊರತುಪಡಿಸಿ, ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಎಸ್‌ ಅಬ್ದುಲ್‌ ನಜೀರ್‌, ಕೆ ಎಂ ಜೋಸೆಫ್‌, ಎಂ ಆರ್‌ ಶಾ ಮತ್ತು ಸಂಜೀವ್‌ ಖನ್ನಾ ಅವರು 2023ರ ಮೇ 15ರವರೆಗೆ ಕೊಲಿಜಿಯಂನಲ್ಲಿ ಇರಲಿದ್ದಾರೆ.

ಸಿಜೆಐ ಚಂದ್ರಚೂಡ್‌ ಅವರ ಉತ್ತರಾಧಿಕಾರಿ ನ್ಯಾ. ಸಂಜೀವ್‌ ಖನ್ನಾ ಅವರಾಗಿದ್ದಾರೆ. ಸದ್ಯ ಕೊಲಿಜಿಯಂನಲ್ಲಿ ಭಾಗಿಯಾಗುವ ನಾಲ್ವರು ನ್ಯಾಯಮೂರ್ತಿಗಳ ಪೈಕಿ ನ್ಯಾ. ಖನ್ನಾ ಅವರು ಒಬ್ಬರಾಗಲು ಹಿರಿಯರಾಗಿಲ್ಲ. ನ್ಯಾ. ಖನ್ನಾ ಅವರಿಗೆ ಕೊಲಿಜಿಯಂನಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಿಸಲಾಗಿದೆ.

ಈ ಹಿಂದೆ ಮೂವರು ನ್ಯಾಯಮೂರ್ತಿಗಳ ಪ್ರಕರಣದಲ್ಲಿ ಹಾಲಿ ಸಿಜೆಐ ಹಾಗೂ ಉತ್ತರಾಧಿಕಾರಿಯಾಗಲಿರುವ ನ್ಯಾಯಮೂರ್ತಿ ಕೊಲಿಜಿಯಂನಲ್ಲಿ ಇರಬೇಕು ಎಂದು ಸ್ವತಃ ಸುಪ್ರೀಂ ಕೋರ್ಟ್‌ ಹೇಳಿತ್ತು.

“ ಸಾಮಾನ್ಯವಾಗಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೈಕಿಯಲ್ಲಿ ಒಬ್ಬರು ನ್ಯಾಯಮೂರ್ತಿ ಹಾಲಿ ಸಿಜೆಐ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಒಂದು ವೇಳೆ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಒಬ್ಬರೂ ಉತ್ತರಾಧಿಕಾರಿಯಾಗುವ ಸಾಧ್ಯತೆ ಇಲ್ಲದಿದ್ದರೆ ಮುಂದಿನ ಸಿಜೆಐ ಆಗಲಿರುವ ನ್ಯಾಯಮೂರ್ತಿಗಳನ್ನು ಕೊಲಿಜಿಯಂನ ಭಾಗವಾಗಿಸಬೇಕು. ಸಿಜೆಐ ಅವಧಿಯಲ್ಲಿ ನೇಮಕವಾಗುವ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅವರಿಗೆ ಹಕ್ಕಿರಬೇಕಾಗುತ್ತದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

2023ರ ಮೇ 15ರಂದು ನ್ಯಾಯಮೂರ್ತಿ ಎಂ ಆರ್‌ ಶಾ ಅವರು ನಿವೃತ್ತಿ ಹೊಂದಲಿದ್ದು, ಆ ಬಳಿಕ ಕೊಲಿಜಿಯಂ ಸಹಜ ಸ್ಥಿತಿಗೆ ಬರಲಿದೆ. 37ನೇ ಸಿಜೆಐ ಆಗಿದ್ದ ಕೆ ಜಿ ಬಾಲಕೃಷ್ಣನ್‌ ಅವರ ಅವಧಿಯಲ್ಲಿ ಈ ವಿಶೇಷ ಸಂದರ್ಭ ನಿರ್ಮಾಣವಾಗಿತ್ತು. ನ್ಯಾ. ಬಾಲಕೃಷ್ಣನ್‌ ಅವರು 3 ವರ್ಷ 117 ದಿನಗಳು ಸಿಜೆಐ ಆಗಿದ್ದರು.

ಬಾಲಕೃಷ್ಣನ್‌ ಅವರು 2007ರ ಜನವರಿ 14ರಂದು ಸಿಜೆಐ ಆಗಿ ನೇಮಕವಾಗಿದ್ದಾಗ ಎಂಟು ಹಿರಿಯ ನ್ಯಾಯಮೂರ್ತಿಗಳಿದ್ದರು (ನ್ಯಾಯಮೂರ್ತಿಗಳಾದ ಬಿ ಎನ್‌ ಅಗರ್ವಾಲ್‌, ಅಶೋಕ್‌ ಭಾನ್‌, ಅರ್ಜಿತ್‌ ಪಸಾಯತ್‌ ಬಿ ಪಿ ಸಿಂಗ್‌, ಎಚ್‌ ಕೆ ಸೀಮಾ, ಎಸ್‌ ಬಿ ಸಿನ್ಹಾ, ಎ ಆರ್‌ ಲಕ್ಷ್ಮಣನ್‌ ಮತ್ತು ಜಿ ಪಿ ಮಾಥೂರ್‌). ನ್ಯಾ. ಬಾಲಕೃಷ್ಣನ್‌ ಅವರ ಉತ್ತರಾಧಿಕಾರಿ ನ್ಯಾ. ಎಸ್‌ ಎಚ್‌ ಕಪಾಡಿಯಾ ಅವರಿಗಿಂತ ಎಂಟು ನ್ಯಾಯಮೂರ್ತಿಗಳು ಹಿರಿಯರಾಗಿದ್ದರು.

ನ್ಯಾ. ಚಂದ್ರಚೂಡ್‌ ಅವರು ಸುದೀರ್ಘ ಅವಧಿಗೆ ಸಿಜೆಐ ಆಗಿರುವುದರಿಂದ ಕೊಲಿಜಿಯಂ ಸಮೀಕರಣವು ಹಲವು ರೀತಿಯ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ನ್ಯಾಯಮೂರ್ತಿಗಳಾದ ಕೌಲ್‌, ನಜೀರ್‌, ಜೋಸೆಫ್‌, ಶಾ ಮತ್ತು ಖನ್ನಾ ಅವರು ಕೊಲಿಜಿಯಂ ಸದಸ್ಯರಾಗುವುದರಿಂದ ಬದಲಾವಣೆ ಆರಂಭವಾಗಲಿದೆ. ಆನಂತರದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಸೂರ್ಯಕಾಂತ್‌, ಹೃಷಿಕೇಷ್‌ ರಾಯ್‌, ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್‌ ಮತ್ತು ಎ ಎಸ್‌ ಬೋಪಣ್ಣ ಅವರು ಕೊಲಿಜಿಯಂ ಸದಸ್ಯರಾಗಲಿದ್ದಾರೆ.

2024ರ ನವೆಂಬರ್‌ ವೇಳೆಗೆ ನ್ಯಾಯಮೂರ್ತಿಗಳಾದ ಖನ್ನಾ, ಕಾಂತ್‌, ಗವಾಯಿ, ರಾಯ್‌ ಅವರು ಕೊಲಿಜಿಯಂನಲ್ಲಿ ಉಳಿಯಲಿದ್ದಾರೆ. ಇವೆರಲ್ಲರೂ ಕಾಲಕ್ರಮೇಣ ಸಿಜೆಐಗಳಾಗಿ ಪದೋನ್ನತಿ ಪಡೆಯಲಿದ್ದಾರೆ. ನ್ಯಾ. ಚಂದ್ರಚೂಡ್‌ ಅವರು ನಿವೃತ್ತಿಯಾದ ಬಳಿಕ ನ್ಯಾ. ಅಭಯ್‌ ಎಸ್‌ ಓಕ್‌ ಅವರು ಕೊಲಿಜಿಯಂಗೆ ಸೇರ್ಪಡೆಯಾಗಲಿದ್ದಾರೆ.

Related Stories

No stories found.
Kannada Bar & Bench
kannada.barandbench.com