
ಪಾಕಿಸ್ತಾನದ ವಿರುದ್ಧ ಈಚೆಗೆ ನಡೆದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಭಾರತೀಯ ವಾಯುಪಡೆಯ (ಐಎಎಫ್) ಮಹಿಳಾ ಅಧಿಕಾರಿಯೊಬ್ಬರನ್ನು ಸೇವೆಯಿಂದ ಬಿಡುಗಡೆಗೊಳಿಸದಂತೆ ಈಚೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೇ ವೇಳೆ ಅವರಿಗೆ ಶಾಶ್ವತ ಕಮಿಷನ್ ಒದಿಗಸಲು ಅದು ನಿರಾಕರಿಸಿದೆ [ವಿಂಗ್ ಕಮಾಂಡರ್ ಸುಚೇತಾ ಎಡ್ನ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].
ಮುಂದಿನ ಆದೇಶದವರೆಗೆ ಮಹಿಳಾ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠ ಆದೇಶಿಸಿತು.
ವಿಚಾರಣೆ ವೇಳೆ ಭಾರತೀಯ ಸೇನಾ ಪಡೆಗಳ ಕಾರ್ಯವನ್ನು ನ್ಯಾಯಾಲಯ ಶ್ಲಾಘಿಸಿತು. ರಕ್ಷಣಾ ಸಿಬ್ಬಂದಿ ದೇಶದ ಮಹತ್ವದ ಆಸ್ತಿಯಾಗಿದ್ದು ಅವರ ಸಮರ್ಪಣಾ ಮನೋಭಾವದಿಂದಾಗಿ ನಾಗರಿಕರು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಿದೆ ಎಂದು ಹೇಳಿತು.
ತಮಗೆ ಶಾಶ್ವತ ಕಮಿಷನ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಪರೇಷನ್ ಸಿಂದೂರ್ ಮತ್ತು ಆಪರೇಷನ್ ಬಾಲಕೋಟ್‌ನಲ್ಲಿ ಭಾಗವಹಿಸಿದ್ದ ಭಾರತೀಯ ವಾಯುಸೇನೆಯ ಮಹಿಳಾ ವಿಂಗ್ ಕಮಾಂಡರ್ ಸುಚೇತಾ ಎಡ್ನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
2019ರ ನೀತಿ ಅಧಿಕಾರಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಚೇತಾ ಪರವಾಗಿ ಹಾಜರಾದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಹೇಳಿದರು. ಆಕೆ ಹದಿಮೂರುವರೆ ವರ್ಷ ಸೇವೆ ಪೂರ್ಣಗೊಳಿಸಿದ್ದು ದೈಹಿಕವಾಗಿ ಗಟ್ಟಿಮುಟ್ಟಾಗಿದ್ದಾರೆ. ಪರಿಣಿತ ಫೈಟರ್ ನಿಯಂತ್ರಕರ ಅರ್ಹತೆಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಒಂದು ತಿಂಗಳೊಳಗೆ ತನ್ನ ಸೇವೆಯನ್ನು ಕೊನೆಗೊಳಿಸುವಂತೆ ಆಕೆ ಮೇಲೆ ಒತ್ತಡ ಹೇರಲಾಗಿದೆ ಎಂದು ಅವರು ತಿಳಿಸಿದರು.
ವಾದ ಆಲಿಸಿದ ನ್ಯಾಯಾಲಯ ಸುಚೇತಾ ಅವರಿಗೆ ಶಾಶ್ವತ ಕಮಿಷನ್ ನಿರಾಕರಿಸಲು ಕಾರಣವೇನು ಎಂದು ಸರ್ಕಾರಿ ವಕೀಲೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಭಾಟಿ ಒಂದು ಮಂಡಳಿ ಅವರನ್ನು ಅನರ್ಹ ಎಂದು ಘೋಷಿಸಿದೆ ಮತ್ತು ಇನ್ನೊಂದು ಮಂಡಳಿ ಪರಿಶೀಲಿಸಬೇಕಾಗಿದ್ದರೂ, ಅವರು ಯಾವುದೇ ಔಪಚಾರಿಕ ಕ್ರಮ ಕೈಗೊಂಡಿಲ್ಲ. ಈ ಮಧ್ಯೆ ಆಕೆ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದರು.
ರಕ್ಷಣಾ ಸಿಬ್ಬಂದಿ ಹವಾನಿಯಂತ್ರಿತ ಕಚೇರಿಗಳಲ್ಲಿ ಕೆಲಸ ಮಾಡುವ ಸಾಮಾನ್ಯ ನಾಗರಿಕ ಸೇವಕರಲ್ಲ ಎಂದ ನ್ಯಾಯಾಲಯ ಮುಂದಿನ ಆದೇಶದವರೆಗೂ ವಿಂಗ್ ಕಮಾಂಡರ್ ಸುಚೇತಾ ಅವರನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂಬುದಾಗಿ ನಿರ್ದೇಶನ ನೀಡಿತು.