ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಪ್ರೊ. ಅಲಿ ವಿರುದ್ಧದ ತನಿಖಾ ವ್ಯಾಪ್ತಿ ವಿಸ್ತರಿಸದಂತೆ ಎಸ್ಐಟಿಗೆ ಸುಪ್ರೀಂ ತಾಕೀತು

ಆದರೆ, ತಮಗೆ ವಿಧಿಸಿದ್ದ ಜಾಮೀನು ಷರತ್ತು ಸಡಿಲಿಸುವಂತೆ ಅಲಿ ಅವರು ಮಾಡಿದ ಮನವಿಯ ಕುರಿತು ನಿರ್ದೇಶನ ನೀಡಲು ನ್ಯಾಯಾಲಯ ನಿರಾಕರಿಸಿತು.
Ali Khan Mahmudabad, Supreme Court
Ali Khan Mahmudabad, Supreme Court Facebook
Published on

ಆಪರೇಷನ್ ಸಿಂಧೂರ್ ಕುರಿತ ಕೆಲವು ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರಿಗೆ ಬಂಧನದಿಂದ ರಕ್ಷಣೆ ನೀಡುವಾಗ ವಿಧಿಸಿದ್ದ ಷರತ್ತುಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

ಆನ್‌ಲೈನ್‌ ಪೋಸ್ಟ್‌ ಪ್ರಕಟಣೆ ಮತ್ತು ಹೇಳಿಕೆ ನೀಡದಂತೆ ವಿಧಿಸಲಾಗಿದ್ದ ಷರತ್ತುಗಳಿಗೆ ಅಲಿ ಅವರು ನಿರ್ದಿಷ್ಟವಾಗಿ ಆಕ್ಷೇಪಿಸಿದ್ದರು.

Also Read
ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಂಧಿತ ಪ್ರಾಧ್ಯಾಪಕ ಅಲಿ ಖಾನ್‌

ನ್ಯಾಯಾಲಯ ವಿಧಿಸಿರುವ ನಿರ್ಬಂಧ ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದ ಪೋಸ್ಟ್‌ ಮತ್ತು ಹೇಳಿಕೆ ನೀಡದಂತೆ ನಿರ್ಬಂಧಿಸುತ್ತದೆಯೇ ವಿನಾ ಎಲ್ಲಾ ಪೋಸ್ಟ್‌ ಪ್ರಕಟಣೆಗಳು ಮತ್ತು ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಲ್ಲ ಎಂದು ನ್ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ ತಿಳಿಸಿತು.

"ಅವರು (ಅಲಿ ಖಾನ್‌) ಬರೆಯಬಹುದು, ಮಾತನಾಡಬಹುದು. ನಿರ್ಬಂಧವಿಲ್ಲ. ಆದರೆ, ತನಿಖಾ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲ," ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಹೀಗಾಗಿ ಖಾನ್‌ ಕೋರಿಕೆ ಕುರಿತು ಸದ್ಯಕ್ಕೆ ನಿರ್ದೇಶನ ನೀಡಲು ನಿರಾಕರಿಸಿತು. ಜುಲೈನಲ್ಲಿ ನಡೆಯಲಿರುವ ಮುಂದಿನ ವಿಚಾರಣೆಯ ದಿನದಂದು ಆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತು.

ಅಲಿ ಅವರ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುವ ತನಿಖೆ ಸರ್ವವ್ಯಾಪಿಯಾಗಿರದೆ, ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸೀಮಿತವಾಗಿರಬೇಕು ಎಂದು ಕೂಡ ನ್ಯಾಯಾಲಯ ಆದೇಶಿಸಿದ್ದು ಖಾನ್‌ಗೆ ಸೀಮಿತ ಪರಿಹಾರ ದೊರೆತಂತಾಗಿದೆ.

ಅಲಿ ಅವರ ಕಟ್ಟಡವನ್ನು ಶೋಧಿಸಬೇಕಾಗುತ್ತದೆ ಎಂದು ಸರ್ಕಾರವು ಹೇಳಿದಾಗ ತನಿಖೆಯ ವ್ಯಾಪ್ತಿ ವಿಸ್ತರಿಸಲಾಗದು. ಎರಡು ಎಫ್‌ಐಆರ್‌ಗಳಿಗೆ ಮಾತ್ರವೇ ಸೀಮಿತವಾಗಿ ತನಿಖೆ ನಡೆಸಿ ಎಂದು ನ್ಯಾಯಾಲಯವು ಕಟು ಶಬ್ದಗಳಲ್ಲಿ ಹೇಳಿತು.

ಅಲಿ ಅವರು ತಮ್ಮ ಆಕ್ಷೇಪಿತ ಫೇಸ್‌ಬುಕ್ ಹೇಳಿಕೆಯಲ್ಲಿ , "ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಮೂಲಕ ಭಾರತವು ಪಾಕಿಸ್ತಾನಕ್ಕೆ "ನೀವು ನಿಮ್ಮ ಭಯೋತ್ಪಾದನಾ ಸಮಸ್ಯೆಯನ್ನು ನಿಭಾಯಿಸದಿದ್ದರೆ ನಾವು ನಿಭಾಯಿಸಬೇಕಾಗುತ್ತದೆ!" ಎಂಬ ಸಂದೇಶವನ್ನು ನೀಡಿದೆ ಎಂದು ಬರೆದುಕೊಂಡಿದ್ದರು.

ಮುಂದುವರೆದು, ಯುದ್ಧವನ್ನು ಕುರುಡಾಗಿ ಬೆಂಬಲಿಸುವವರನ್ನು ಅವರು ಟೀಕಿಸಿದ್ದರು, "ಯುದ್ಧದಿಂದಾಗಿ ಎರಡೂ ಬದಿಯಲ್ಲಿ ನಾಗರಿಕರ ಜೀವಹಾನಿ ಸಂಭವಿಸುತ್ತದೆ, ಈ ಕಾರಣಕ್ಕಾಗಿಯೇ ಯುದ್ಧಗಳನ್ನು ತಪ್ಪಿಸಬೇಕು. ಕೆಲವರು ವಿವೇಚನಾರಹಿತರಾಗಿ ಯುದ್ಧವನ್ನು ಪ್ರತಿಪಾದಿಸುತ್ತಿದ್ದಾರೆ, ಆದರೆ ಅವರಾರೂ ಯುದ್ಧವನ್ನು ಕಂಡಿಲ್ಲ ಅಥವಾ ಯುದ್ಧಪೀಡಿತ ಪ್ರದೇಶಗಳಿಗೆ ಭೇಟಿಯನ್ನೂ ನೀಡಿಲ್ಲ..." ಎಂದು ಅವರು ಹೇಳಿದ್ದರು.

Also Read
ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಪ್ರೊ. ಅಲಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ, ಎಫ್‌ಐಆರ್‌ಗೆ ಇಲ್ಲ ತಡೆ

ಅಲ್ಲದೆ, ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗೋಷ್ಠಿಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಕುರೇಷಿಯನ್ನು ಹೊಗಳುತ್ತಿರುವ ಬಲಪಂಥೀಯ ಬೆಂಬಲಿಗರು, ಗುಂಪು ಹಲ್ಲೆ ಮತ್ತು ಆಸ್ತಿಗಳನ್ನು ಮನಸೋ ಇಚ್ಛೆಯಾಗಿ ಧ್ವಂಸಗೊಳಿಸುತ್ತಿರುವ ಪ್ರಕರಣಗಳ ಸಂತ್ರಸ್ತರ ಪರವಾಗಿಯೂ ಮಾತನಾಡುವಂತೆ ಕೋರಿದ್ದರು.

ಕರ್ನಲ್ ಕುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ಪತ್ರಿಕಾಗೋಷ್ಠಿ ನಡೆಸಲು ನಿಯೋಜಿಸಿದ ಆಲೋಚನೆ ನೈಜ ಬದಲಾವಣೆಗಳನ್ನು ಸೂಚಿಸಬೇಕು, ಇಲ್ಲವಾದಲ್ಲಿ ಕೇವಲ ಬೂಟಾಟಿಕೆಯ ಸಂಗತಿಯಾಗುತ್ತದೆ ಎಂದಿದ್ದರು.

ಯೋಗೇಶ್‌ ಜಥೇರಿ ಎಂಬುವವರು ಹಾಗೂ ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರ ದೂರನ್ನು ಆಧರಿಸಿ ಅಲಿ ಅವರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿತ್ತು.  

Kannada Bar & Bench
kannada.barandbench.com