
ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ- 1996ರ ಸೆಕ್ಷನ್ 34 ಮತ್ತು 37ರ ಅಡಿಯಲ್ಲಿ ಮಧ್ಯಸ್ಥಿಕೆ ತೀರ್ಪು ಮಾರ್ಪಡಿಸಲು ನ್ಯಾಯಾಲಯಗಳಿಗೆ ಇರುವ ಅಧಿಕಾರಕ್ಕೆ ಸಂಬಂಧಿಸಿದ ಕಾನೂನು ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಪರಿಶೀಲಿಸಲಿದೆ [ಗಾಯತ್ರಿ ಬಾಲಸಾಮಿ Vs ISG ನೊವಾಸಾಫ್ಟ್ ಟೆಕ್ನಾಲಜೀಸ್ ಲಿಮಿಟೆಡ್ ನಡುವಣ ಪ್ರಕರಣ].
ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಗುರುವಾರ ಪ್ರಕರಣ ವರ್ಗಾಯಿಸಿ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಆದೇಶ ಹೊರಡಿಸಿತು.
ಮಧ್ಯಸ್ಥಿಕೆಯ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವನ್ನು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 34 ಒದಗಿಸುತ್ತದೆ. ಮಧ್ಯಸ್ಥಿಕೆ ಪ್ರಕ್ರಿಯೆ ನ್ಯಾಯೋಚಿತ ಮತ್ತು ಕಾನೂನುಬದ್ಧವಾಗಿ ಉಳಿಯುವಂತೆ ನೋಡಿಕೊಳ್ಳುವುದಕ್ಕಾಗಿ ಪರಿಹಾರವನ್ನು ಅಥವಾ ತೀರ್ಪನ್ನು ಬದಿಗೆ ಸರಿಸುವ ಅವಕಾಶವನ್ನು ಇದು ನೀಡುತ್ತದೆ.
ಮಧ್ಯಸ್ಥಿಕೆ ತೀರ್ಪು ಸಾರ್ವಜನಿಕ ನೀತಿ ಉಲ್ಲಂಘಿಸುವಂತಿದ್ದರೆ, ಮಧ್ಯಸ್ಥಿಕೆ ಒಪ್ಪಂದ ಅಮಾನ್ಯವಾಗಿದ್ದರೆ, ನ್ಯಾಯಮಂಡಳಿಯ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದರೆ ಇಲ್ಲವೇ ಸವಾಲೆತ್ತಿದ ಪಕ್ಷಕಾರರಿಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳ ಸರಿಯಾದ ನೋಟಿಸ್ ನೀಡದೆ ಇದ್ದಾಗ ತೀರ್ಪನ್ನು ಬದಿಗೆ ಸರಿಸುವ ಅವಕಾಶಗಳಿರುತ್ತವೆ.
ಆದರೆ ಮಧ್ಯಸ್ಥಿಕೆ ತೀರ್ಪಿನ ಅರ್ಹತೆಯ ಪರಿಶೀಲನೆಗೆ ಸೆಕ್ಷನ್ 34 ಅವಕಾಶ ನೀಡುವುದಿಲ್ಲ. ಮಧ್ಯಸ್ಥಿಕೆಯಲ್ಲಿ ಆತ್ಯಂತಿಕತೆ ಮತ್ತು ದಕ್ಷತೆಯ ತತ್ವಗಳನ್ನು ಎತ್ತಿಹಿಡಿಯುವ ಸಲುವಾಗಿ ಕನಿಷ್ಠ ಮಟ್ಟದ ನ್ಯಾಯಾಂಗ ಹಸ್ತಕ್ಷೇಪಕ್ಕೆ ಮಾತ್ರವೇ ಒತ್ತು ನೀಡಿ ನ್ಯಾಯಾಲಯಗಳು ಈ ನಿಯಮವನ್ನು ಸಂಕುಚಿತವಾಗಿ ಅರ್ಥೈಸಿವೆ.
ಫೆಬ್ರವರಿ 2024 ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಕೆ ವಿ ವಿಶ್ವನಾಥನ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಸಂಬಂಧ ವಿವಿಧ ಪ್ರಶ್ನೆಗಳನ್ನೆತ್ತಿತ್ತು. ಅಲ್ಲದೆ ತಾನೇ ನೀಡಿದ ತೀರ್ಪುಗಳು ಅಸಮಂಜಸ ಮಾರ್ಗದರ್ಶನ ನೀಡಿವೆ ಎಂದು ಅದು ಆಗ ಒಪ್ಪಿಕೊಂಡಿತ್ತು. ಬಳಿಕ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗವಾಗಿತ್ತು. ಅದರಂತೆ ಗುರುವಾರ ಸಿಜೆಐ ಖನ್ನಾ ನೇತೃತ್ವದ ಪೀಠದೆದುರು ಪ್ರಕರಣ ವಿಚಾರಣೆಗೆ ಬಂದಾಗ ಅದು ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಅರವಿಂದ ದಾತಾರ್ ಮತ್ತು ವಕೀಲ ನಿಶಾಂತ್ ಪಾಟೀಲ್ ವಾದ ಮಂಡಿಸಿದ್ದರು. ಪ್ರತಿವಾದಿಗಳನ್ನು ಹಿರಿಯ ವಕೀಲ ಸೌರಭ್ ಕಿರ್ಪಾಲ್ ಮತ್ತಿತರರು ಪ್ರತಿನಿಧಿಸಿದ್ದರು.