ತುರ್ತು ಪರಿಸ್ಥಿತಿ ಘೋಷಣೆಯ ಸಿಂಧುತ್ವದ ಬಗೆಗಿನ ತಕರಾರು: ಪರಿಶೀಲನೆಯ ಜಿಜ್ಞಾಸೆಯ ಬಗ್ಗೆ ಆಲಿಸಲು ಮುಂದಾದ ಸುಪ್ರೀಂ

ಮೊದಲಿಗೆ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿರಲಿಲ್ಲ. ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯ ಸಿಂಧುತ್ವವನ್ನು 45 ವರ್ಷಗಳ ಬಳಿಕ ಪರಿಶೀಲಿಸಬಹುದೇ, ಇಲ್ಲವೇ ಎನ್ನುವ ಬಗ್ಗೆ ಆಲಿಸಲು ತೀರ್ಮಾನಿಸಿತು.
Britannica.com
Britannica.com

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು 1975ರಲ್ಲಿ ಘೋಷಿಸಿದ್ದ ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಾಂವಿಧಾನಿಕ ಸಿಂಧುತ್ವ ವಿಚಾರವನ್ನು ಪರಿಶೀಲನೆ ನಡೆಸಬಹುದೇ, ಇಲ್ಲವೇ ಎನ್ನುವ ಬಗ್ಗೆ ಆಲಿಸಲು ಸೋಮವಾರ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

'ಸುದೀರ್ಘ ಅವಧಿಯ ನಂತರ' ಅಂತಹ (ತುರ್ತು ಪರಿಸ್ಥಿತಿ) ಘೋಷಣೆಯ ಸಿಂಧುತ್ವದ ಬಗ್ಗೆ ತನಿಖೆ ನಡೆಸಲು ಸಾಧ್ಯವೇ, ಇಲ್ಲವೇ ಎನ್ನುವುದಕ್ಕೆ ಸೀಮಿತಗೊಳಿಸಿ ಅರ್ಜಿದಾರರನ್ನು ಆಲಿಸಲು ಬಯಸುವುದಾಗಿ ತಿಳಿಸಿ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ದಿನೇಶ್‌ ಮಹೇಶ್ವರಿ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

“ಇಷ್ಟು ವರ್ಷಗಳ ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯ ತನಿಖೆ ಸಾಧ್ಯವೋ, ಇಲ್ಲವೋ ಎನ್ನುವುದನ್ನು ಗಮನಿಸಲು ನಾವು ನಿರಾಕರಿಸುವುದಿಲ್ಲ. ಮನವಿಯ (ಎ) ಅಂಶಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸುತ್ತೇವೆ. ಘನ ಹಿರಿಯ ವಕೀಲರು ಮನವಿಯನ್ನು ಪುನರ್‌ ರಚಿಸಬಹುದು. ಡಿಸೆಂಬರ್‌ 18ರ ಒಳಗೆ ಮನವಿಯನ್ನು ತಿದ್ದುಪಡಿ ಮಾಡಬಹುದು” ಎಂದು ನ್ಯಾಯಪೀಠವು ಹೇಳಿದೆ.

ತುರ್ತುಪರಿಸ್ಥಿತಿ ಘೋಷಣೆಯ ಸಿಂಧುತ್ವವನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದಿಸಿದ ಬಳಿಕ ನ್ಯಾಯಾಲಯ ಆದೇಶ ಹೊರಡಿಸಿತು.

“ಯುದ್ಧಾಪರಾಧಗಳ ಕುರಿತಾದ ವಿಚಾರಗಳ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ವಿಶ್ವ ಸಮರದ ಬಳಿಕವೂ ಆಗ ನಡೆದ ಹತ್ಯಾಕಾಂಡ ಕುರಿತು ದಾವೆಗಳನ್ನು ಹೂಡಲಾಗುತ್ತಿದೆ. ಇದು (ರಾಷ್ಟ್ರೀಯ ತುರ್ತು ಪರಿಸ್ಥಿತಿ) ಸಂವಿಧಾನಕ್ಕೆ ಮಾಡಿರುವ ವಂಚನೆ. ಈ ಕುರಿತು ಘನ ನ್ಯಾಯಾಲಯ ನಿರ್ಧರಿಸಬೇಕು ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಇದು ರಾಜಕೀಯ ಚರ್ಚೆಗೆ ಗ್ರಾಸವಾಗುವ ವಿಚಾರವಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೈದಿಗಳಿಗೆ ಏನಾಯಿತು ಎಂದು ನಾವು ನೋಡಿಲ್ಲವೇ” ಎಂದರು.

Also Read
ತುರ್ತುಸ್ಥಿತಿ 'ಅಸಾಂವಿಧಾನಿಕ' ಎಂದು ಘೋಷಿಸಲು 94 ವರ್ಷದ ವಯೋವೃದ್ಧೆಯಿಂದ ಸುಪ್ರೀಂ‌ನಲ್ಲಿ ಮನವಿ: ಹರೀಶ್ ಸಾಳ್ವೆ ವಾದ

ಮೊದಲಿಗೆ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿರಲಿಲ್ಲ. ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯ ಸಿಂಧುತ್ವವನ್ನು 45 ವರ್ಷಗಳ ಬಳಿಕ ಪರಿಶೀಲಿಸಬಹುದೇ, ಇಲ್ಲವೇ ಎನ್ನುವ ಬಗ್ಗೆ ಆಲಿಸಲು ತೀರ್ಮಾನಿಸಿತು

ಭಾರತ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿ ಅದನ್ನು ಹಿಂಪಡೆದ ಬಳಿಕ ಅದನ್ನು ಅಸಾಂವಿಧಾನಿಕ ಎಂದು ಘೋಷಿಸಿ, 25 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಕೋರಿ 94 ವರ್ಷದ ವಯೋವೃದ್ಧೆ ವೆರಾ ಸರೀನ್ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com