'ಐಪಿಸಿ ಅಡಿಯ ಅಪರಾಧಗಳಲ್ಲಿಯೂ ಆರೋಪಿಗಳಿಗೆ ಬಂಧನದ ಕಾರಣ ಒದಗಿಸಬೇಕೆ?' ನಿರ್ಧರಿಸಲಿದೆ ಸುಪ್ರೀಂ

ತಮ್ಮ ಬಂಧನಕ್ಕೆ ಕಾರಣ ಒದಗಿಸದೆ ಇರುವುದರಿಂದ ಐಪಿಸಿಯಡಿ ಆರೋಪ ಹೊತ್ತಿರುವವರು ಜಾಮೀನು ಅರ್ಜಿ ಬದಲಿಗೆ ರಿಟ್ ಅರ್ಜಿ ಸಲ್ಲಿಸುತ್ತಿದ್ದು ತನ್ನ ತೀರ್ಪು ದುರುಪಯೋಗವಾಗುತ್ತಿದೆ ಎಂದ ಪೀಠ.
Arrest AI image
Arrest AI image
Published on

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ರೀತಿಯ ವಿಶೇಷ ಕಾಯಿದೆಗಳಡಿ ಬಂಧಿತರಾದ ಆರೋಪಿಗಳಿಗೆ ಬಂಧನಕ್ಕೆ ಆಧಾರ ಒದಗಿಸುವಂತೆ ತಾನು ಈಚೆಗೆ ನೀಡಿದ್ದ  ತೀರ್ಪುಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಸ್ಪಷ್ಟವಾದ ಅಪರಾಧ ಕೃತ್ಯದ ಆರೋಪ ಹೊತ್ತಿರುವವರು ಸಹ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ [ಮಿಹಿರ್‌ ರಾಜೇಶ್‌ ಶಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ]

ಐಪಿಸಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳಲ್ಲಿ ಜಾಮೀನು ಅರ್ಜಿ ಬದಲು ರಿಟ್ ಅರ್ಜಿ ಸಲ್ಲಿಸುವ ಆರೋಪಿಗಳು ಬಂಧನಕ್ಕೆ ಆಧಾರ ಏನೆಂಬುದನ್ನು ತಮಗೆ ತಿಳಿಸುತ್ತಿಲ್ಲವಾದ್ದರಿಂದ ರಿಟ್‌ ಅರ್ಜಿ ಸಲ್ಲಿಸುತ್ತಿರುವುದಾಗಿ ಹೇಳುತ್ತಾರೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ಹೇಳಿದೆ.

Also Read
ಆರೋಪಿಗೆ ಬಂಧನದ ಕಾರಣ ತಿಳಿಸದಿದ್ದರೆ ಜಾಮೀನು ಷರತ್ತು ಅನ್ವಯವಾಗದು: ಸುಪ್ರೀಂ ಕೋರ್ಟ್

ವಿಶೇಷ ಕಾಯಿದೆಗಳ ಅಡಿಯಲ್ಲಿನ ಅಪರಾಧಗಳಿಗೆ ಸಂಬಂಧಿಸಿದಂತೆ ಆ ಕಾಯಿದೆಯಡಿಯ ಆರೋಪಿಗಳಿಗೆ ಬಂಧನದ ಆಧಾರ ಒದಗಿಸುವುದಕ್ಕೂ ಐಪಿಸಿ ಅಡಿಯಲ್ಲಿನ ಆರೋಪಿಗಳಿಗೆ ಬಂಧನದ ಆಧಾರ ಒದಗಿಸುವುದಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

"ವ್ಯವಸ್ಥೆ ತನ್ನ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದನ್ನು ನಾವು ಬಯಸುವುದಿಲ್ಲ ಮತ್ತು ಆರೋಪಿಗಳು ನಮ್ಮ ಕೆಲವು ಅವಲೋಕನಗಳ ಲಾಭ ಪಡೆದು ಸೆಕ್ಷನ್ 438ರ ಅಡಿಯಲ್ಲಿ ಅಥವಾ ಸಂಪೂರ್ಣವಾಗಿ 226ನೇ ವಿಧಿಯ ವ್ಯಾಪ್ತಿಗೆ ಬರಬೇಕೆಂದು ನಾವು ಬಯಸುವುದಿಲ್ಲ. ಪ್ರಶ್ನೆ ಏನೆಂದರೆ, ಒಬ್ಬ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದರೆ, ಬಂಧನದ ವಿಷಯದ ಆಧಾರದ ಲಾಭವನ್ನು ಅವನಿಗೆ ನೀಡಬೇಕೇ ಎಂಬುದಾಗಿದೆ" ಎಂದು ನ್ಯಾ. ಗವಾಯಿ ಹೇಳಿದರು.

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧನಕ್ಕೆ ನೀಡಲಾಗುವ ಆಧಾರಗಳನ್ನು ಐಪಿಸಿ ಅಪರಾಧಗಳಿಂದ ಪ್ರತ್ಯೇಕಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಈ ನಿಟ್ಟಿನಲ್ಲಿ, ನ್ಯಾಯಾಲಯವು ಪರಿಗಣಿಸಬೇಕಾದ ಎರಡು ಪ್ರಶ್ನೆಗಳನ್ನು ರೂಪಿಸಿತು:

1. ಪ್ರತಿಯೊಂದು ಪ್ರಕರಣದಲ್ಲಿಯೂ, ಅದು ಐಪಿಸಿ ಅಪರಾಧಗಳಿದ್ದರೂ ಸಹ, ಬಂಧನಕ್ಕೆ ಮೊದಲು ಅಥವಾ ಬಂಧನವಾದ ಕೂಡಲೇ ಆರೋಪಿಗೆ ಬಂಧನದ ಕಾರಣಗಳನ್ನು ಒದಗಿಸುವುದು ಅಗತ್ಯವೇ?

2. ಕೆಲ ತುರ್ತು ಪರಿಸ್ಥಿತಿಗಳಿಂದಾಗಿ ಅಸಾಧಾರಣ ಸಂದರ್ಭಗಳಲ್ಲಿ ಬಂಧನಕ್ಕೆ ಮೊದಲು ಅಥವಾ ನಂತರ ಬಂಧನಕ್ಕೆ ಕಾರಣ ಒದಗಿಸಲು ಸಾಧ್ಯವಿಲ್ಲವೇ? ಅಂತಹ ಸಂದರ್ಭಗಳಲ್ಲಿ, ಸಿಆರ್‌ಪಿಸಿ ಸೆಕ್ಷನ್ 50ಅನ್ನು ಪಾಲಿಸದೆ ಇರುವುದು ಬಂಧನವನ್ನು ದುರ್ಬಲಗೊಳ್ಳುತ್ತದೆಯೇ?

ಸಿಆರ್‌ಪಿಸಿ ಸೆಕ್ಷನ್ 50ರ ಪ್ರಕಾರ, ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಅಥವಾ ಇತರೆ ವ್ಯಕ್ತಿ, ಬಂಧಿತನಿಗೆ ಆತನ ಅಪರಾಧದ ಸಂಪೂರ್ಣ ವಿವರಗಳನ್ನು ಅಥವಾ ಅಂತಹ ಬಂಧನಕ್ಕೆ ಕಾರಣವಾದ ಇತರ ಅಂಶಗಳನ್ನು ತಕ್ಷಣವೇ ತಿಳಿಸಬೇಕು.

Also Read
'ಬಂಧನಕ್ಕೆ ಆಧಾರ ಒದಗಿಸದಿದ್ದಲ್ಲಿ ಆ ಬಂಧನ ಅಸಿಂಧುವೇ?' ಇತ್ಯರ್ಥಪಡಿಸಲಿದೆ ಸುಪ್ರೀಂ ಕೋರ್ಟ್

ಮುಂಬೈನ ವರ್ಲಿಯಲ್ಲಿ ಕಳೆದ ಜುಲೈನಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಬಣದ ನಾಯಕ ರಾಜೇಶ್​ ಶಾ ಅವರ ಪುತ್ರ ಮಿಹಿರ್‌ ಚಲಾಯಿಸುತ್ತಿದ್ದ ಎನ್ನಲಾದ ಬಿಎಂಡಬ್ಲ್ಯೂ ಕಾರು ಅತಿವೇಗವಾಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಪತಿ ಗಾಯಗೊಂಡಿದ್ದರು.  ತಮ್ಮ ಬಂಧನಕ್ಕೆ ಆಧಾರ ಒದಗಿಸಿಲ್ಲ ಎಂದು ಮಿಹಿರ್‌ ವಾದಿಸಿದ್ದರೂ ಬಾಂಬೆ ಹೈಕೋರ್ಟ್‌ ಅವರ ಬಂಧನ ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಸೇರಿದಂತೆ ಸಂಬಂಧಿತ ಅರ್ಜಿಗಳ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಈ ವಿಚಾರ ತಿಳಿಸಿದೆ.

ಮಿಹಿರ್‌ ಶಾ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ, ಅಮಿಕಸ್ ಕ್ಯೂರಿಯಾಗಿ ಹಾಜರಾದ ವಕೀಲ ಶ್ರೀ ಸಿಂಗ್, ಸಂಬಂಧಿತ ಪ್ರಕರಗಳಲ್ಲಿ ಹಿರಿಯ ವಕೀಲ ವಿಕ್ರಮ್ ಚೌಧರಿ , ವಕೀಲ ಕಾರ್ಲ್ ರುಸ್ತೊಮ್ಖಾನ್ ವಾದ ಮಂಡಿಸಿದರು.

Kannada Bar & Bench
kannada.barandbench.com