ಮುಸಲ್ಮಾನರಲ್ಲಿ ತಲಾಖ್ ಎ ಹಸನ್ ಆಚರಣೆ ಪ್ರಶ್ನಿಸುವ ಅರ್ಜಿಯ ತುರ್ತುವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಕಾರ ವ್ಯಕ್ತಪಡಿಸಿದೆ.
ತಲಾಖ್ ಪದ್ದತಿ ಅಸಾಂವಿಧಾನಿಕ ಹಾಗೂ ಸ್ವೇಚ್ಛಾನುಸಾರವಾಗಿದ್ದು ಸಂವಿಧಾನದ 14, 15, 21 ಮತ್ತು 25 ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸುವಂತೆ ಪತ್ರಕರ್ತೆ ಬೆನಜೀರ್ ಹೀನಾ ಅವರು ವಕೀಲ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ತ್ರಿವೇದಿ ಅವರಿದ್ದ ರಜಾಕಾಲೀನ ಪೀಠದ ಮುಂದೆ ಹಿರಿಯ ವಕೀಲೆ ಪಿಂಕಿ ಆನಂದ್ ಅವರು ಅರ್ಜಿಯನ್ನು ಪ್ರಸ್ತಾಪಿಸಿದರು. ಮೇ 19ರಂದು ತಮ್ಮ ಪತಿ ತಲಾಖ್‌ಗೆ ಸಂಬಂಧಿಸಿದಂತೆ ಎರಡನೇ ನೋಟಿಸ್ ಕಳುಹಿಸಿದ್ದರಿಂದ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಹೀನಾ ಕೋರಿದ್ದರು.
ನ್ಯಾಯಾಲಯದ ರಜೆ ಅವಧಿ ಮುಗಿಯುವುದರೊಳಗೆ ಹೀನಾ ಅವರಿಗೆ ಮೂರನೇ ನೋಟಿಸ್ ಬಂದಿರುತ್ತದೆ ಎಂಬ ಪಿಂಕಿ ಅವರ ವಾದವನ್ನು ಮನ್ನಿಸದ ನ್ಯಾಯಾಲಯ “ಇದರಲ್ಲಿ ಯಾವುದೇ ತುರ್ತು ಇಲ್ಲ. (ನ್ಯಾಯಾಲಯಗಳ ಬೇಸಿಗೆ) ರಜೆ ಮುಗಿದ ನಂತರ ಅರ್ಜಿ ತೆಗೆದುಕೊಳ್ಳೋಣ. ಮೊದಲ ನೋಟಿಸ್ ಪಡೆದ ನಂತರ ಕೆಲ ಸಮಯ ಕಳೆದು ಬಂದಿದ್ದೀರಿ” ಎಂದು ಆಕ್ಷೇಪಿಸಿತು. ಇದೇ ವೇಳೆ, ನ್ಯಾಯಾಲಯ ಮತ್ತೊಂದು ರಜಾಕಾಲೀನ ಪೀಠದ ಮುಂದೆ ಪ್ರಕರಣವನ್ನು ಮತ್ತೆ ಪ್ರಸ್ತಾಪಿಸುವಂತೆ ಸಲಹೆ ನೀಡಿತು.