ಸೆಂಟ್ರಲ್ ವಿಸ್ತಾ ಮರು ಅಭಿವೃದ್ಧಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ದೆಹಲಿ ಹೈಕೋರ್ಟ್ ಈಗಾಗಲೇ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದೆ ಎಂಬ ಅಂಶವನ್ನು ಆಧರಿಸಿ ಸರ್ವೋಚ್ಛ ನ್ಯಾಯಾಲಯ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
Central vista and Supreme Court
Central vista and Supreme Court

ನವದೆಹಲಿಯ ಸೆಂಟ್ರಲ್ ವಿಸ್ತಾ ಮರುಅಭಿವೃದ್ಧಿ ಪ್ರಕರಣವನ್ನು ದೆಹಲಿ ಹೈಕೋರ್ಟ್‌ ವಿಚಾರಣೆಗೆ ಪರಿಗಣಿಸಿದೆ ಎಂಬ ಅಂಶವನ್ನು ಆಧರಿಸಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿತು.

ಆದರೂ ಪ್ರಕರಣದ ಶೀಘ್ರ ವಿಚಾರಣೆಗೆ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಎದುರು ಕೋರುವ ಸ್ವಾತಂತ್ರ್ಯವನ್ನು ನ್ಯಾಯಮೂರ್ತಿಗಳಾದ ವಿನೀತ್ ಸರಣ್‌ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ ಅರ್ಜಿದಾರರಿಗೆ ನೀಡಿತು. ಜೊತೆಗೆ ಶೀಘ್ರ ವಿಚಾರಣೆಯ ಮನವಿಗೆ ಸ್ಪಂದಿಸುವಂತೆ ದೆಹಲಿ ಹೈಕೋರ್ಟ್‌ಗೆ ಅದು ಸೂಚಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಹೆಚ್ಚಳದಿಂದಾಗಿ ಸೆಂಟ್ರಲ್‌ ವಿಸ್ತಾ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮರುಅಭಿವೃದ್ಧಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

“ಮಾನವ ಹಿತದ ಬಿಕ್ಕಟ್ಟು ಎದುರಾಗಿದೆ. ಯೋಜನೆಯನ್ನು 4 ರಿಂದ 6 ವಾರಗಳ ಕಾಲ ಮುಂದೂಡಿದರೆ ಏನೂ ಆಗುವುದಿಲ್ಲ ಕ್ರಿಕೆಟ್‌ ಪಂದ್ಯಾವಳಿ ಐಪಿಎಲ್ ಕೂಡ ರದ್ದಾಗಿದೆ. ಹಿಂದೆಂದೂ ಕಂಡಿರದ ರೀತಿಯಲ್ಲಿ ಸೋಂಕು ಹರಡುತ್ತಿದೆ” ಎಂದು ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ಅರ್ಜಿದಾರರ ಪರವಾಗಿ ವಾದಿಸಿದ್ದರು. ಜೊತೆಗೆ ಅರ್ಜಿ ಅದರ ಸ್ವರೂಪದಲ್ಲಿ ಕಾಮಗಾರಿಗೆ ವಿರುದ್ಧವಾಗಿಲ್ಲ ಮತ್ತು ಮನುಷ್ಯರ ಬದುಕಿನ ಬಗ್ಗೆ ಕಾಳಜಿ ಹೊಂದಿದೆ ಎಂದಿದ್ದರು.

ಆದರೆ ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಅರ್ಜಿದಾರರು ಪಿಐಎಲ್ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಹೈಕೋರ್ಟ್‌ನ ಮುಂದೂಡಿಕೆ ಆದೇಶದ ವಿರುದ್ಧ ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸುವುದು ಗಂಭೀರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ವಾದಿಸಿದರು. ಮುಂದೂಡಿಕೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದು ತಪ್ಪು ಪೂರ್ವನಿದರ್ಶನಗಳಿಗೆ ಕಾರಣವಾಗುತ್ತದೆ ಎಂದು ಕೂಡ ಅವರು ಹೇಳಿದರು.

Also Read
2:1 ಬಹುಮತದ ತೀರ್ಪಿನ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ದೆಹಲಿ ಸೆಂಟ್ರಲ್‌ ವಿಸ್ತಾ ಪ್ರದೇಶದ ಮರು ಅಭಿವೃದ್ಧಿ ಮತ್ತು ನೂತನ ಸಂಸತ್‌ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು. ಪ್ರಧಾನಮಂತ್ರಿ ಹಾಗೂ ಉಪರಾಷ್ಟ್ರಪತಿ ಅವರ ನಿವಾಸ, ಹಲವಾರು ಕಚೇರಿ ಕಟ್ಟಡಗಳು ಮತ್ತು ವಿವಿಧ ಸಚಿವಾಲಯಗಳ ಕಚೇರಿಗಳನ್ನು ಹೊಂದಿದ ಕೇಂದ್ರ ಸೆಕ್ರೇಟರಿಯೇಟ್‌ ಇಲ್ಲಿ ನೆಲೆಯೂರಲಿವೆ. ಭೂ ಬಳಕೆ ಮತ್ತು ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಕೆಲ ಅರ್ಜಿಗಳನ್ನು ತಿರಸ್ಕರಿಸಿ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಜನವರಿ 5 ರಂದು ಯೋಜನೆಗೆ ಹಸಿರು ನಿಶಾನೆ ತೋರಿತ್ತು.

Related Stories

No stories found.
Kannada Bar & Bench
kannada.barandbench.com