ವಿದ್ಯಾರ್ಥಿ ನಾಯಕನ ಕೊಲೆ ಪ್ರಕರಣ: ಕೇಂದ್ರ ಸಚಿವ ಅಜಯ್‌ ಮಿಶ್ರಾ ಸಲ್ಲಿಸಿದ್ದ ವರ್ಗಾವಣೆ ಮನವಿ ತಿರಸ್ಕರಿಸಿದ ಸುಪ್ರೀಂ

ಲಖನೌಗೆ ಪ್ರಯಾಣಿಸಲು ಆಗದೆ ಇರುವುದು ಅಜಯ್‌ ಮಿಶ್ರಾ ಅವರು ವರ್ಗಾವಣೆ ಅರ್ಜಿ ಸಲ್ಲಿಸಲು ಕಾರಣವಾಗಿದ್ದು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಹೈಕೋರ್ಟ್‌ಗೆ ಮನವಿ ಮಾಡಬಹುದು ಎಂದು ಅವರ ಪರ ವಕೀಲರಿಗೆ ತಿಳಿಸಿದ ಪೀಠ.
Ajay Mishra Teni and Supreme Court
Ajay Mishra Teni and Supreme Court
Published on

ವಿದ್ಯಾರ್ಥಿ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಿಂದ ಅಲಾಹಾಬಾದ್‌ ಹೈಕೋರ್ಟ್‌ ಪ್ರಧಾನ ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ  ಅವರು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ರಾಜೀವ್‌ ಗುಪ್ತಾ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಲಖನೌಗೆ ಪ್ರಯಾಣಿಸಲು ಆಗದೆ ಇರುವುದು ಮಿಶ್ರಾ ಅವರು ವರ್ಗಾವಣೆ ಅರ್ಜಿ ಸಲ್ಲಿಸಲು ಕಾರಣವಾಗಿದ್ದು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಹೈಕೋರ್ಟ್‌ಗೆ ಮನವಿ ಮಾಡಬಹುದು ಎಂದು ಮಿಶ್ರಾ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ನ್ಯಾ. ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಸಲಹೆ ನೀಡಿತು.

Also Read
ಲಖಿಂಪುರ್ ಖೇರಿ ಪ್ರಕರಣದ ಆರೋಪಿ ಮಿಶ್ರಾ ಜಾಮೀನು ಪ್ರಶ್ನಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ವಿದ್ಯಾರ್ಥಿ ನಾಯಕ ಪ್ರಭಾತ್ ಗುಪ್ತಾ ಅವರನ್ನು 2000ನೇ ಇಸವಿಯಲ್ಲಿ,  ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಶ್ರಾ ಸೇರಿದಂತೆ ಮೂವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. 2004ರಲ್ಲಿ ಜಿಲ್ಲಾ ನ್ಯಾಯಾಲಯ ಮಿಶ್ರಾ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶಿಸಿ ಉತ್ತರ ಪ್ರದೇಶ ಸರ್ಕಾರ  ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್‌ ಮಾರ್ಚ್ 12, 2018 ರಂದು ತೀರ್ಪು ಕಾಯ್ದಿರಿಸಿದ್ದು ಆರು ತಿಂಗಳೊಳಗೆ ತೀರ್ಪು ನೀಡದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಚಾರಣೆಗೆ ಮತ್ತೆ ಪಟ್ಟಿ ಮಾಡುವಂತೆ ಸೂಚಿಸಲಾಗಿತ್ತು. ಪ್ರಕರಣವನ್ನು ಮೇ 16 ರಂದು ಅಂತಿಮ ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿ ಏಪ್ರಿಲ್ 7ರಂದು ಹೈಕೋರ್ಟ್‌ ಆದೇಶ ನೀಡಿತ್ತು.

Also Read
[ಲಖೀಂಪುರ್‌ ಖೇರಿ] ಸಾಕ್ಷಿ ಮೇಲೆ ಹಲ್ಲೆಯಾಗಿದೆ ಎಂದ ಭೂಷಣ್‌; ಮಿಶ್ರಾ ಜಾಮೀನು ವಿರೋಧಿಸಿದ ಅರ್ಜಿ ವಿಚಾರಣೆ ಮಾ.15ಕ್ಕೆ

ಪ್ರಕರಣವನ್ನು ಎಂಟು ಬಾರಿ ಮುಂದೂಡಲಾಗಿದ್ದು ಈಗ ನವೆಂಬರ್ 10ಕ್ಕೆ ಪಟ್ಟಿ ಮಾಡಲಾಗಿದೆ. ಸಾಕಷ್ಟು ಬಾರಿ ಹೈಕೋರ್ಟ್‌ ಪ್ರಕರಣವನ್ನು ಮುಂದೂಡುತ್ತಿದ್ದು ಅದನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ಕೋರಿ ಮೂಲ ದೂರುದಾರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆಯೂ ಸುಪ್ರೀಂ  ಕೋರ್ಟ್‌ ಈ ತೀರ್ಪು ನೀಡಿದೆ.

ಲಖನೌ ಪೀಠದ ಬದಲಿಗೆ ಅಲಾಹಾಬಾದ್ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕೆಂಬ ತಮ್ಮ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ಆದೇಶವನ್ನು ಮಿಶ್ರಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Rajeev_Gupta_v__State_of_UP.pdf
Preview
Kannada Bar & Bench
kannada.barandbench.com