![[ಉದಯಪುರ ಫೈಲ್ಸ್] ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ: ತ್ವರಿತ ನಿರ್ಧಾರಕ್ಕಾಗಿ ಕೇಂದ್ರ ಸರ್ಕಾರದ ಸಮಿತಿಗೆ ಸೂಚನೆ](http://media.assettype.com/barandbench-kannada%2F2025-07-16%2Fbmhb1xt9%2FZXrU0qwH.jpeg?w=480&auto=format%2Ccompress&fit=max)
ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ತಕ್ಷಣವೇ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ಸಿನಿಮಾಟೋಗ್ರಾಫ್ ಕಾಯಿದೆಯ ಸೆಕ್ಷನ್ 6ರ ಅಡಿಯಲ್ಲಿ ಕೇಂದ್ರ ಸರ್ಕಾರ ತನ್ನ ಮರುಪರಿಶೀಲನಾ ಅಧಿಕಾರ ಬಳಸಿಕೊಂಡು ಸಿನಿಮಾ ಪರಿಶೀಲಿಸುವಂತೆ ಜುಲೈ 10ರಂದು ಹೈಕೋರ್ಟ್ ನೀಡಿದ್ದ ಆದೇಶದಂತೆ ಕೇಂದ್ರ ಸರ್ಕಾರ ಚಿತ್ರ ಪರಿಶೀಲನೆ ಮುಂದುವರೆಸಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.
ಪ್ರಕರಣ ಬಾಕಿ ಇಡುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಹೈಕೋರ್ಟ್‌ನಲ್ಲಿ ಅಭಿಪ್ರಾಯ ಮಂಡಿಸಬಹುದು. ಒಂದು ವೇಳೆ ಕೇಂದ್ರ ಚಿತ್ರದಲ್ಲಿ ತಪ್ಪಿಲ್ಲ ಎಂದು ಹೇಳಿದರೆ ಆ ಬಳಿಕ ತಾನು ಪರಿಶೀಲಿಸುವುದಾಗಿ ಹೇಳಿತು. ಚಿತ್ರದ ದೃಶ್ಯಗಳನ್ನು ತೆಗೆಯುವಂತೆ ಸರ್ಕಾರ ಹೇಳಿದರೆ ಅದನ್ನೂ ನಂತರ ವಿಚಾರಣೆ ನಡೆಸಬಹುದು. ಕೇಂದ್ರ ಸರ್ಕಾರ ಈ ವಿಷಯವನ್ನೇ ಕೈಗೆತ್ತಿಕೊಳ್ಳದಿದ್ದರೆ ಅದು ಬೇರೆ ವಿಚಾರ. ಸಮಿತಿ ರಚಿಸಲಾಗಿದ್ದು ಕೇಂದ್ರ ಅದನ್ನು ಪರಿಶೀಲಿಸುತ್ತಿದೆ ಎಂದು ನಮಗೆ ತಿಳಿದುಬಂದಿದೆ. ಒಂದೆರಡು ದಿನ ಕಾಯೋಣ ಎಂದು ನ್ಯಾಯಾಲಯ ವಿವರಿಸಿತು.
ಅಲ್ಲದೆ, ಚಲನಚಿತ್ರ ಕುರಿತಾದ ಆಕ್ಷೇಪಣೆಗಳನ್ನು ನಿರ್ಧರಿಸಲು ರಚಿಸಲಾದ ಸಮಿತಿ ಸಮಯ ವ್ಯರ್ಥ ಮಾಡದೆ ಪ್ರಕರಣದ ಬಗ್ಗೆ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 21ರಂದು ನಡೆಸುವುದಾಗಿ ಹೇಳಿತು.
ಚಿತ್ರದ ವಸ್ತು ವಿಷಯಗಳ ಬಗ್ಗೆ ಹೈಕೋರ್ಟ್ ಹೇಳಿಕೆ ನೀಡಿಲ್ಲ, ಬದಲಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಅರ್ಜಿದಾರರರಿಗೆ ತಿಳಿಸಿದೆ ಎಂದ ಸುಪ್ರೀಂ ಕೋರ್ಟ್ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಮಧ್ಯಂತರ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದಿತು. ಇದಲ್ಲದೆ, ಸಮಿತಿ ಇಂದು ಚಲನಚಿತ್ರ ಪರಿಶೀಲಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತು.
ಕನ್ಹಯ್ಯಾ ಲಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಸಮಿತಿಯ ಮುಂದೆ ಹಾಜರಿರಲು ನ್ಯಾಯಾಲಯ ಇದೇ ವೇಳೆ ಅನುಮತಿ ನೀಡಿತು.
ದೆಹಲಿ ಹೈಕೋರ್ಟ್ ತಡೆ ವಿಧಿಸಿರುವುದನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಜುಲೈ 10ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜುಲೈ 14ರಂದು ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿತ್ತು.
ಉದಯಪುರದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆಯನ್ನು ಆಧರಿಸಿದ ಚಿತ್ರವನ್ನು ನಿಷೇಧಿಸಬೇಕೆಂದು ಕೋರಿ ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಸಲ್ಲಿಸಿದ್ದ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳ ವಿಚಾರಣೆ ನಡೆಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಚಿತ್ರ ಜುಲೈ 11ರಂದು ಬಿಡುಗಡೆಯಾಗಬೇಕಿತ್ತು.