ಉದಯಪುರ ಫೈಲ್ಸ್ ವಿವಾದ: ದೆಹಲಿ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಚಿತ್ರ ನಿರ್ಮಾಪಕರು

ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂದು ನಿರ್ಮಪಕರ ಪರ ವಕೀಲರು ಇಂದು ಮನವಿ ಮಾಡಿದರು.
ಉದಯಪುರ ಫೈಲ್ಸ್ ವಿವಾದ: ದೆಹಲಿ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಚಿತ್ರ ನಿರ್ಮಾಪಕರು
Published on

ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ತಡೆ ವಿಧಿಸಿರುವುದನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ .

ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂದು ನಿರ್ಮಪಕರ ಪರ ವಕೀಲರು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.

Also Read
'ಉದಯಪುರ ಫೈಲ್ಸ್' ಚಿತ್ರ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ; ಚಿತ್ರದ ಕುರಿತು ನಿರ್ಧರಿಸಲು ಕೇಂದ್ರಕ್ಕೆ ಸೂಚನೆ

ಒಂದೆರಡು ದಿನಗಳಲ್ಲಿ ಪ್ರಕರಣವನ್ನು ಆಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು. ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಗೌರವ್ ಭಾಟಿಯಾ ವಾದ ಮಂಡಿಸಿದರು.

ಸಿನಿಮಾಟೋಗ್ರಾಫ್ ಕಾಯಿದೆಯ ಸೆಕ್ಷನ್ 6ರ ಅಡಿಯಲ್ಲಿ ಕೇಂದ್ರ ಸರ್ಕಾರ ತನ್ನ ಮರುಪರಿಶೀಲನಾ ಅಧಿಕಾರ ಬಳಸಿಕೊಂಡು ಸಿನಿಮಾ ಪರಿಶೀಲಿಸುವಂತೆ ಜುಲೈ 10ರಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.

ರಾಜಸ್ಥಾನದ ಉದಯಪುರದಲ್ಲಿ ಇಸ್ಲಾಂವಾದಿಗಳು ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ ಆರೋಪ ಕೇಳಿಬಂದಿತ್ತು. ದಾಳಿಕೋರರು ದಾಳಿಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು. ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಆರೋಪದ ಮೇಲೆ ಲಾಲ್ ಅವರನ್ನು ಕೊಲ್ಲಲಾಗಿತ್ತು. ತನಿಖೆ ಎನ್‌ಐಎಗೆ ವರ್ಗಾವಣೆಯಾಗಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಉದಯಪುರದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆಯನ್ನು ಆಧರಿಸಿದ ಈ ಚಿತ್ರವನ್ನು ನಿಷೇಧಿಸಬೇಕೆಂದು ಕೋರಿ ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಮೂರು ಅರ್ಜಿಗಳ ವಿಚಾರಣೆ ನಡೆಸಿ ಆದೇಶ ಹೊರಡಿಸಲಾಗಿತ್ತು. ಈ ಚಿತ್ರ ಜುಲೈ 11ರಂದು ಬಿಡುಗಡೆಯಾಗಬೇಕಿತ್ತು.

ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅನೀಶ್ ದಯಾಳ್ ಅವರಿದ್ದ ಪೀಠ ಸೂಚಿಸಿತ್ತು. ಚಿತ್ರ ಬಿಡುಗಡೆಗೆ ತಡೆ ನೀಡಿತ್ತು.

"ಅರ್ಜಿದಾರರು ಎರಡು ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ನಾವು ಅನುಮತಿಸುತ್ತೇವೆ. ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದರೆ, ಅವರು ಮಧ್ಯಂತರ ಕ್ರಮಗಳಿಗಾಗಿ ಪ್ರಾರ್ಥನೆ ಸಲ್ಲಿಸಬಹುದು. ಅರ್ಜಿದಾರರು ಮರುಪರಿಶೀಲನಾ ಮನವಿಯೊಂದಿಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ ನಂತರ, ಈ ಕುರಿತು ನಿರ್ಮಾಪಕರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಿ ಒಂದು ವಾರದೊಳಗೆ ನಿರ್ಧಾರ ಕೈಗೊಳ್ಳಬೇಕು" ಎಂದು ಅದು ಆದೇಶಿಸಿತ್ತು.

Also Read
ಉದಯಪುರ ಫೈಲ್ಸ್ ಚಿತ್ರ ತಡೆಗೆ ಸುಪ್ರೀಂ ನಕಾರ: ಕನ್ಹಯ್ಯಾ ಲಾಲ್ ಕೊಲೆ ಆರೋಪಿಗಳಿಗೆ ಇಲ್ಲ ಮಧ್ಯಂತರ ಪರಿಹಾರ

ಚಲನಚಿತ್ರದಲ್ಲಿನ ಕೆಲವು ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಸಿಬಿಎಫ್‌ಸಿ ಅದಕ್ಕೂ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿತ್ತು. ನಂತರ ನ್ಯಾಯಾಲಯ ಪ್ರಕರಣದಲ್ಲಿ  ಮದನಿ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಸಿಬಿಎಫ್‌ಸಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರಿಗೆ  ಚಿತ್ರ ಮತ್ತು ಟ್ರೇಲರ್‌ ಪ್ರದರ್ಶನ ಏರ್ಪಡಿಸುವಂತೆ ನಿರ್ಮಾಪಕರಿಗೆ ನಿರ್ದೇಶಿಸಿತ್ತು.

ಚಿತ್ರ ವೀಕ್ಷಿಸಿದ್ದ ಸಿಬಲ್‌ ನಂತರ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. “ಚಿತ್ರ ನೋಡಿ ತನಗೆ ದಿಗ್ಭ್ರಮೆಯಾಗಿದೆ. ಇದು ದೇಶಕ್ಕೆ ಸೂಕ್ತವಾದುದಲ್ಲ, ಇದು ಕಲೆ ಅಲ್ಲ, ಇದು ಚಲನಚಿತ್ರದ ಹೆಸರಿನಲ್ಲಿ ವಿಧ್ವಂಸಕ ಕೃತ್ಯ” ಎಂದಿದ್ದರು.

ಜುಲೈ 10ರಂದು ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆ ನೀಡಿ, ಅರ್ಜಿದಾರರು ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸುವಂತೆ ಸೂಚಿಸಿತ್ತು. ತಡೆಯಾಜ್ಞೆಯ ವಿರುದ್ಧ ನಿರ್ಮಾಪಕರು ಇದೀಗ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

Kannada Bar & Bench
kannada.barandbench.com