ರೋಹಿಂಗ್ಯಾ ನಿರಾಶ್ರಿತರನ್ನು ಕೇಂದ್ರ ಸರ್ಕಾರ ಸಮುದ್ರಪಾಲು ಮಾಡಿದ ಆರೋಪ: ಪುರಾವೆ ಕೇಳಿದ ಸುಪ್ರೀಂ

ಸಾಮಾಜಿಕ ಮಾಧ್ಯಮದ ಮಾಹಿತಿ ಸಂಗ್ರಹಿಸಿ ಅರ್ಜಿ ಸಲ್ಲಿಸುವುದು ಕೂಡದು ಎಂದು ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರನ್ನುದ್ದೇಶಿಸಿ ನ್ಯಾ. ಸೂರ್ಯ ಕಾಂತ್ ಹೇಳಿದರು.
ರೋಹಿಂಗ್ಯಾ ನಿರಾಶ್ರಿತರನ್ನು ಕೇಂದ್ರ ಸರ್ಕಾರ ಸಮುದ್ರಪಾಲು ಮಾಡಿದ ಆರೋಪ: ಪುರಾವೆ ಕೇಳಿದ ಸುಪ್ರೀಂ
Published on

ರೋಹಿಂಗ್ಯಾ ನಿರಾಶ್ರಿತರನ್ನು ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಬಿಡುವ ಮೂಲಕ ಕೇಂದ್ರ ಸರ್ಕಾರ ಬಲವಂತವಾಗಿ ಗಡಿಪಾರು ಮಾಡುತ್ತಿದೆ ಎಂಬ ಆರೋಪವನ್ನು ಪರಿಗಣಿಸುವ ಕುರಿತಂತೆ ಸುಪ್ರೀಂ ಕೋರ್ಟ್‌ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ [ಮೊಹಮ್ಮದ್‌ ಇಸ್ಮಾಯಿಲ್‌ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಇಬ್ಬರು ರೋಹಿಂಗ್ಯಾ ನಿರಾಶ್ರಿತರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ದೃಢವಾದ ಪುರಾವೆಗಳಿಲ್ಲದೆ ನ್ಯಾಯಾಲಯ ಇಂತಹ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿತು.

Also Read
ರೋಹಿಂಗ್ಯಾ ಮಕ್ಕಳಿಗೆ ಶಿಕ್ಷಣ: ತಾರತಮ್ಯ ಮಾಡುವಂತಿಲ್ಲ ಎಂದ ಸುಪ್ರೀಂ ಕೋರ್ಟ್

"ಪ್ರತಿ ಬಾರಿಯೂ, ನಿಮಗೆ ಹೊಸ ಕಥೆ ದೊರೆಯುತ್ತದೆ. ಈಗ (ಎಲ್ಲಿಂದ) ಈ ಸುಂದರವಾಗಿ ಹೆಣೆದ ಕಥೆ ದೊರೆತಿದೆ?... ಈ ವಿಡಿಯೋಗಳು ಮತ್ತು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದವರು ಯಾರು? ಆತ ಹೇಗೆ ಮರಳಿದ? ಅಧಿಕೃತವಾಗಿ ಏನು ಸಾಕ್ಷ್ಯವಿದೆ?" ಎಂದು ನ್ಯಾಯಮೂರ್ತಿ ಕಾಂತ್ ಅರ್ಜಿದಾರರ ಪರ ವಕೀಲ ಕಾಲಿನ್‌ ಗೊನ್ಸಾಲ್ವೇಸ್‌ ಅವರನ್ನು ಪ್ರಶ್ನಿಸಿದರು.

ಸಾಮಾಜಿಕ ಮಾಧ್ಯಮದ ಮಾಹಿತಿ ಸಂಗ್ರಹಿಸಿ ಅರ್ಜಿ ಸಲ್ಲಿಸುವುದು ಕೂಡದು ಎಂದು ಇದೇ ವೇಳೆ ನ್ಯಾ. ಕಾಂತ್ ಹೇಳಿದರು.

ದೇಶ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ನೀವು ಇಂತಹ ಕಾಲ್ಪನಿಕ ಅರ್ಜಿಗಳನ್ನು ಸಲ್ಲಿಸುತ್ತಿದ್ದೀರಿ ಎಂದು ಪೀಠ ಬಹುಶಃ ಪಹಲ್ಗಾಮ್‌ ಪ್ರಕರಣವನ್ನು ಉಲ್ಲೇಖಿಸದೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿತು.

ಪ್ರತಿ ಬಾರಿಯೂ, ನಿಮಗೆ ಹೊಸ ಕಥೆ ದೊರೆಯುತ್ತದೆ. ದೇಶ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ನೀವು ಇಂತಹ ಕಾಲ್ಪನಿಕ ಅರ್ಜಿಗಳನ್ನು ಸಲ್ಲಿಸುತ್ತಿದ್ದೀರಿ.

ಸುಪ್ರೀಂ ಕೋರ್ಟ್‌

ರೋಹಿಂಗ್ಯಾ ನಿರಾಶ್ರಿತರನ್ನು ಅಂಡಮಾನ್‌ಗೆ ಕರೆದೊಯ್ದು ಅವರನ್ನು ಜೀವ ರಕ್ಷಕ ಕವಚಗಳೊಂದಿಗೆ ಸಮುದ್ರದಲ್ಲಿ ಬಿಡಲಾಗಿದೆ. ಈ ಕುರಿತು ಮಯಾನ್ಮಾರ್‌ನಿಂದ ದೆಹಲಿಯಲ್ಲಿರುವ ಅರ್ಜಿದಾರರಿಗೆ ಫೋನ್‌ ಕರೆ ಬಂದಿತ್ತು. ಈ ಕುರಿತು ಫೋನ್‌ ಕರೆಯ ವಿವರಗಳಿವೆ. ಅಲ್ಲದೆ ವಿದೇಶಿ ಮಾಧ್ಯಮ ವರದಿಗಳನ್ನು ನ್ಯಾಯಾಲಯ ಗಮನಿಸಬಹುದು. ಹೀಗಾಗಿ ತನಿಖೆ ನಡೆಸಬೇಕು ಎಂದು ಗೊನ್ಸಾ‌ಲ್ವೆಸ್‌ ಕೋರಿದರು.

ಆದರೆ ಇದರಿಂದ ತೃಪ್ತವಾಗದ ನ್ಯಾಯಾಲಯ “ಕರೆಗಳನ್ನು ಪರಿಶೀಲಿಸಿದ ಬಗ್ಗೆ ದಾಖಲೆಗಳಿಲ್ಲದೆ ಅದನ್ನು ಹೇಗೆ ದೃಢೀಕರಿಸುತ್ತೀರಿ. ಅರ್ಜಿದಾರರು ಕಣ್ಣಾರೆ ನೋಡಿಲ್ಲ. ವಿದೇಶಿ ಮಾಧ್ಯಮ ವರದಿಗಳನ್ನು ದಾಖಲೆಗಳಲ್ಲಿ ಸಲ್ಲಿಸಿ. ಆಗ ನೋಡೋಣ. ಅರ್ಜಿದಾರರು ದೇಶದ ಸಾರ್ವಭೌಮತ್ವ ಮತ್ತು ಅಧಿಕಾರವನ್ನು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.

ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಈ ಪೀಠದಲ್ಲಿರುವ ನ್ಯಾಯಮೂರ್ತಿಗಳು ಸೇರಿದಂತೆ ನ್ಯಾ. ದೀಪಂಕರ್‌ ದತ್ತ ಅವರನ್ನು ಒಳಗೊಂಡ ರೋಹಿಂಗ್ಯಾ ನಿರಾಶ್ರಿತರ ಕುರಿತಾದ ಪ್ರಕರಣಗಳನ್ನು ಆಲಿಸುತ್ತಿದ್ದ ಈ ಹಿಂದಿನ ತ್ರಿಸದಸ್ಯ ಪೀಠದ ಮುಂದೆ ಪಟ್ಟಿ ಮಾಡಿತು. ಅರ್ಜಿದಾರರು ಮಾಡಿದ ಆರೋಪಗಳು ಅಸ್ಪಷ್ಟವಾಗಿವೆ ಎಂದು ಕೂಡ ಅದು ತನ್ನ ಆದೇಶದಲ್ಲಿ ಕಳವಳ ವ್ಯಕ್ತಪಡಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಮೇ 31ರಂದು ನಡೆಯಲಿದೆ.

Kannada Bar & Bench
kannada.barandbench.com