ದೆಹಲಿ ಗಲಭೆ: ಸುಪ್ರೀಂ ಕೋರ್ಟ್‌ಗೆ ಉಮರ್‌ ಖಾಲಿದ್‌ ಜಾಮೀನು ಅರ್ಜಿ ಸಲ್ಲಿಕೆ

ತಮಗೆ ಹಾಗೂ ಉಳಿದ ಎಂಟು ಜನರಿಗೆ ಜಾಮೀನು ನಿರಾಕರಿಸಿ ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಖಾಲಿದ್‌ ಪ್ರಶ್ನಿಸಿದ್ದಾರೆ.
Umar Khalid, Supreme Court
Umar Khalid, Supreme Court
Published on

ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ವ್ಯಾಪಕ ಪಿತೂರಿಗೆ ಕಾರಣರಾಗಿದ್ದರು ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ [ಉಮರ್‌ ಖಾಲಿದ್‌ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತಮಗೆ ಹಾಗೂ ಉಳಿದ ಎಂಟು ಜನರಿಗೆ ಜಾಮೀನು ನಿರಾಕರಿಸಿ ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಅವರು ಪ್ರಶ್ನಿಸಿದ್ದಾರೆ.

Also Read
ದೆಹಲಿ ಗಲಭೆ: ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಶಾರ್ಜೀಲ್ ಇಮಾಮ್

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ 2020 ರ ಫೆಬ್ರವರಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟಾಗಿತ್ತು. ದೆಹಲಿ ಪೊಲೀಸರ ಪ್ರಕಾರ ಘಟನೆಯಲ್ಲಿ 53 ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.

ಆರೋಪಿಗಳು ಹಲವು ಗಲಭೆಗಳು ಉಂಟಾಗುವಂತೆ ವಿಸ್ತೃತ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ದೆಹಲಿ ಪೊಲೀಸ್‌ ವಿಶೇಷ ಘಟಕ ಐಪಿಸಿ ಮತ್ತು ಯುಎಪಿಎ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್‌ ದಾಖಲಿಸಿತ್ತು.

ಬಹುತೇಕ ಆರೋಪಿಗಳ ಮೇಲೆ ವಿವಿಧ ಎಫ್‌ಐಆರ್‌ಗಳು ದಾಖಲಾಗಿದ್ದು  ನ್ಯಾಯಾಲಯಗಳಲ್ಲಿ ಹಲವು ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಹೆಚ್ಚಿನವರು 2020ರಿಂದ ಬಂಧನದಲ್ಲಿದ್ದಾರೆ.

ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆಗೆ ಸಂಬಂಧಿಸಿದ ಸೆಕ್ಷನ್‌ಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಖಾಲಿದ್‌ ವಿರುದ್ಧ ಆರೋಪ ಮಾಡಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದು ಜಾಮೀನು ಕೋರಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದು ಎರಡನೇ ಬಾರಿ.  

Also Read
ದೆಹಲಿ ಗಲಭೆ ಪ್ರಕರಣದ ವಿಚಾರಣೆ ವಿಳಂಬವಾಗಲು ಈಗಾಗಲೇ ಜಾಮೀನು ಪಡೆದಿರುವ ಆರೋಪಿಗಳೇ ಕಾರಣ: ದೆಹಲಿ ಹೈಕೋರ್ಟ್

ವಿಚಾರಣಾ ನ್ಯಾಯಾಲಯವು ಮೊದಲು  ಮಾರ್ಚ್ 2022 ರಲ್ಲಿ ಅವರಿಗೆ ಜಾಮೀನು ನಿರಾಕರಿಸಿತ್ತು. ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಸಂದರ್ಭದಲ್ಲಿ ಉಮರ್ ಖಾಲಿದ್ ಅವರು ಅಮರಾವತಿಯಲ್ಲಿ ನೀಡಿದ ಹೇಳಿಕೆಯನ್ನು ಹಗುರವಾಗಿ ತಳ್ಳಿಹಾಕುವಂತಿಲ್ಲ ಎಂದು ಹೈಕೋರ್ಟ್‌ ತಿಳಿಸಿತ್ತು. ಇಡೀ ಪಿತೂರಿಯಲ್ಲಿ ಇಮಾಮ್ ಅವರ ಕೈವಾಡವಿದ್ದು ಅವರು "ಮುಸ್ಲಿಂ ಸಮುದಾಯದ ಸದಸ್ಯರನ್ನು ಸಾಮೂಹಿಕವಾಗಿ ಎತ್ತಿಕಟ್ಟಲು ಕೋಮು ಪ್ರಚೋದನೆಯ ಭಾಷಣ ಮಾಡಿದ್ದರು ಎಂದು ಹೇಳಿ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು. ಅಕ್ಟೋಬರ್ 2022ರಲ್ಲಿ ಅವರಿಗೆ ಜಾಮೀನು ನಿರಾಕರಿಸಿದ್ದರಿಂದ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Kannada Bar & Bench
kannada.barandbench.com