ದೆಹಲಿ ಅಬಕಾರಿ ನೀತಿ ಪ್ರಕರಣ: ಕವಿತಾಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯ ಎಡತಾಕಲು ಸೂಚನೆ

ಕವಿತಾ ವಿರುದ್ಧದ ಪ್ರಕರಣದ ವಿಚಾರಣಾರ್ಹತೆಯ ಬಗ್ಗೆ ಏನನ್ನೂ ಹೇಳಲು ನಿರಾಕರಿಸಿದ ನ್ಯಾಯಾಲಯ, ಅವರ ಜಾಮೀನು ಅರ್ಜಿಯನ್ನು ತ್ವರಿತವಾಗಿ ನಿರ್ಧರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ಕೆ ಕವಿತಾ ಮತ್ತು ಇಡಿ
ಕೆ ಕವಿತಾ ಮತ್ತು ಇಡಿಕೆ ಕವಿತಾ (ಫೇಸ್ಬುಕ್)
Published on

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ.ಕವಿತಾ ಅವರಿಗೆ ಯಾವುದೇ ತುರ್ತು ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂ ಎಂ ಸುಂದರೇಶ್ ಮತ್ತು ಬೇಲಾ ಎಂ ತ್ರಿವೇದಿ ಅವರ ವಿಶೇಷ ಪೀಠವು ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಿತು.

"ವಿಧಿ 32ರ ಅಡಿಯಲ್ಲಿ ಎಲ್ಲಾ ವಿಷಯಗಳಲ್ಲಿಯೂ ಜಾಮೀನು ಕೋರಿದರೆ ವಿಚಾರಣಾರ್ಹತೆಯ ಬಗ್ಗೆ ನೀವು ವಾದಿಸಲು ಸಾಧ್ಯವಿಲ್ಲ. ನಾವು ಏಕರೂಪವಾಗಿರಬೇಕಾಗುತ್ತದೆ. ಸಾಂವಿಧಾನಿಕ ಸವಾಲಿನ ಕುರಿತಾದ ಮುಖ್ಯ ಮನವಿಗೆ ಸಂಬಂಧಿಸಿದಂತೆ ನಾವು ನೋಟಿಸ್ ನೀಡಬಹುದಾಗಿದ್ದು ನಂತರ ಕೈಗೆತ್ತಿಕೊಳ್ಳಬಹುದು" ಎಂದು ಕವಿತಾ ಅವರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ
ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ವಿರುದ್ಧ ಕವಿತಾ ಅವರು ಸಲ್ಲಿಸಿರುವ ಅರ್ಜಿಯ ಸಂಬಂಧ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ನೀಡಿತು. ವಿಜಯ್ ಮದನ್‌ಲಾಲ್‌ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ ಅರ್ಜಿಗಳೊಂದಿಗೆ ಈ ವಿಷಯವನ್ನು ಆಲಿಸಲು ಜೋಡಿಸಲಾಯಿತು.

ಕವಿತಾ ವಿರುದ್ಧದ ಪ್ರಕರಣದ ವಿಚಾರಣಾರ್ಹತೆಯ ಬಗ್ಗೆ ಏನನ್ನೂ ಹೇಳಲು ನಿರಾಕರಿಸಿದ ನ್ಯಾಯಾಲಯ, ಅವರ ಜಾಮೀನು ಅರ್ಜಿಯನ್ನು ತ್ವರಿತವಾಗಿ ನಿರ್ಧರಿಸುವಂತೆ ನಿರ್ದೇಶನ ನೀಡಿತು.

ಜಾರಿ ನಿರ್ದೇಶನಾಲಯದ ಬಂಧನದ ಬಳಿಕ ಕವಿತಾ ತನ್ನ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮಾರ್ಚ್ 16 ರಂದು ದೆಹಲಿ ನ್ಯಾಯಾಲಯವು ಅವರನ್ನು ಒಂದು ವಾರ ಇಡಿ ಕಸ್ಟಡಿಗೆ ನೀಡಿತ್ತು .

ಮಾರ್ಚ್ 15ರಂದು ಹೈದರಾಬಾದ್ನಲ್ಲಿ ಕವಿತಾ ಅವರನ್ನು ಬಂಧಿಸಲಾಗಿದ್ದು, ಜಾರಿ ನಿರ್ದೇಶನಾಲಯದ ತಂಡವು ಶೋಧ ನಡೆಸಿ ವಿಚಾರಣೆ ನಡೆಸಿದ ಕೆಲವೇ ಗಂಟೆಗಳ ನಂತರ.

ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪ್ರಕರಣವನ್ನು ಸಿಬಲ್ ಉಲ್ಲೇಖಿಸಿದರು. ಅದರೆ, ಕವಿತಾ ಅವರು ರಾಜಕೀಯ ವ್ಯಕ್ತಿ ಎಂಬ ಏಕೈಕ ಕಾರಣಕ್ಕಾಗಿ ಅವರ ಅರ್ಜಿಯನ್ನು ನೇರವಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿತು.

ಈಗ ರದ್ದುಪಡಿಸಲಾದ 2021-22ರ ದೆಹಲಿ ಅಬಕಾರಿ ನೀತಿಯ ಅಡಿಯಲ್ಲಿ ದೊಡ್ಡ ಪಾತ್ರ ವಹಿಸಲು ಪ್ರಯತ್ನಿಸುತ್ತಿರುವ ಮದ್ಯ ವ್ಯಾಪಾರಿಗಳ "ಸೌತ್ ಗ್ರೂಪ್" ಲಾಬಿಯೊಂದಿಗೆ ಕವಿತಾ ಸಂಪರ್ಕ ಹೊಂದಿದ್ದಾರೆ ಎಂದು ಇ ಡಿ ಆರೋಪವಾಗಿದೆ.

ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಅವರು ಶರತ್ ರೆಡ್ಡಿ, ಕೆ ಕವಿತಾ ಮತ್ತು ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ನಿಯಂತ್ರಣದಲ್ಲಿರುವ "ಸೌತ್ ಗ್ರೂಪ್" ನ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ಪರವಾಗಿ ಕನಿಷ್ಠ 100 ಕೋಟಿ ರೂ.ಗಳ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಇ ಡಿ ಕಳೆದ ವರ್ಷ ಕವಿತಾ ಅವರನ್ನು ಮೂರು ಬಾರಿ ಪ್ರಶ್ನಿಸಿತು ಮತ್ತು ಈ ವರ್ಷ ಮತ್ತೆ ಸಮನ್ಸ್ ನೀಡಿತು, ಆದರೆ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ನೀಡುವ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿ ಅವರು ಹಾಜರಾಗಲಿಲ್ಲ.

ಆಕೆಯನ್ನು ಬಂಧಿಸಿದ ನಂತರ, ಅವರನ್ನು ದೆಹಲಿಗೆ ಕರೆತರಲಾಯಿತು. ಈ ವೇಳೆ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್‌ಪಾಲ್‌ ಅವರು ಕವಿತಾ ಅವರನ್ನು ಮಾರ್ಚ್ 23 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದರು.

ಅಬಕಾರಿ ನೀತಿ ಪ್ರಕರಣದಲ್ಲಿ ಇ ಡಿಯಿಂದ ಈವರೆಗೆ ಬಂಧಿಸಲ್ಪಟ್ಟ ಪ್ರಮುಖ ರಾಜಕಾರಣಿಗಳ ಸಾಲಿನಲ್ಲಿ ಕವಿತಾ ಮೂರನೆಯವರು. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಾಲ್ಕನೆಯವರು. ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿದೆ. 

Kannada Bar & Bench
kannada.barandbench.com