ತಮಿಳುನಾಡಿನ ಊಟಿಯಲ್ಲಿರುವ ನೂತನ ಸಂಯೋಜಿತ ನ್ಯಾಯಾಲಯ ಸಂಕೀರ್ಣದಲ್ಲಿ ಮಹಿಳೆಯರು ಎದುರಿಸುತ್ತಿದ್ದ ಶೌಚಾಲಯದ ಕೊರತೆಯ ಸಮಸ್ಯೆ ಬಗೆಹರಿಸಲಾಗಿದೆ ಎಂದು ನೀಲಗಿರಿ ಮಹಿಳಾ ವಕೀಲರ ಸಂಘ (ಡಬ್ಲ್ಯೂಎಲ್‌ಎನ್) ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಒದಗಿಸಲಾಗಿರುವ ಸೌಲಭ್ಯಗಳ ಕುರಿತು ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಸಲ್ಲಿಸಿದ್ದ ವಿವರವಾದ ವರದಿಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ರಜೆಕಾಲೀನ ಪೀಠ ಅರ್ಜಿದಾರರಿಗೆ ಈಗ ಯಾವುದೇ ಕುಂದುಕೊರತೆ ಇಲ್ಲ ಎಂಬ ಅಂಶವನ್ನು ದಾಖಲಿಸಿಕೊಂಡಿತು.
ಶೌಚಾಲಯ ವ್ಯವಸ್ಥೆ ಇಲ್ಲ. ಈ ಹಿಂದೆ ಮಹಿಳಾ ವಕೀಲರಿಗೆ ನೀಡಲಾಗಿದ್ದ ಶೌಚಾಲಯ ಮತ್ತು ಕೆಲವು ಕೊಠಡಿಗಳನ್ನು ಸೀಲ್ ಮಾಡಲಾಗಿದೆ ಎಂದು ಆರೋಪಿಸಿ ಡಬ್ಲ್ಯುಎಲ್‌ಎಎನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಸದ್ಯಕ್ಕೆ ಸಮಸ್ಯೆ ಬಗೆಹರಿದಿದೆ ಎಂದು ಸಂಘ ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜುಲೈಗೆ ಮುಂದೂಡಿತು. ಶೌಚಾಲಯ ವ್ಯವಸ್ಥೆ ಕಲ್ಪಿಸಿರುವ ಸಂಬಂಧ ವರದಿ ನೀಡುವಂತೆ (ಕಳೆದ ಶುಕ್ರವಾರ) ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 9 ರಂದು ಸೂಚಿಸಿತ್ತು.
ಸುಮಾರು ಮೂರು ದಶಕಗಳಿಂದ ನ್ಯಾಯಾಲಯ ಸಂಕೀರ್ಣದಲ್ಲಿ ಶೌಚಾಲಯಕ್ಕಾಗಿ ಹೋರಾಟ ನಡೆಸುತ್ತಿರುವ ವಕೀಲೆಯರ ಸಂಕಷ್ಟದ ಕುರಿತು ಬಾರ್ & ಬೆಂಚ್ ಪ್ರಕಟಿಸಿದ್ದ ವರದಿಯನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿತ್ತು. ಆದರೆ ಈ ಅರ್ಜಿಯನ್ನು ವಿರೋಧಿಸಿದ್ದ ನೀಲಗಿರಿ ಜಿಲ್ಲಾ ವಕೀಲರ ಸಂಘ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿತ್ತು. ಸುಪ್ರೀಂ ಕೋರ್ಟ್ ಕಳೆದ ಬಾರಿ ವಿಚಾರಣೆ ನಡೆಸಿದ ಕೆಲವೇ ಗಂಟೆಗಳಲ್ಲಿ ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶರು ಮಹಿಳೆಯರಿಗೆ ವಿಶೇಷವಾದ ಎರಡು ಕೊಠಡಿಗಳು ಮತ್ತು ಶೌಚಾಲಯ ಕಟ್ಟಡ ಮಂಜೂರು ಮಾಡಿದ್ದರು.
ಇಂದು ಕೂಡ ಇದೇ ವಿಷಯ ತಿಳಿಸಿದ್ದರಿಂದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿತು.