ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ಅನಾಥರಾಗಿರುವ ಮಕ್ಕಳಿಗೆ ಆರ್ಥಿಕ ಮತ್ತು ಶೈಕ್ಷಣಿಕ ನೆರವು ನೀಡಲು ಪಿಎಂ ಕೇರ್ಸ್ ನಿಧಿ ಬಳಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ಯೋಜನೆಯ ವಿವರಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಶಿಶು ಆರೈಕೆ ಕೇಂದ್ರಗಳಲ್ಲಿ ಕೋವಿಡ್ ಹರಡುವಿಕೆಗೆ ಸಂಬಂಧಿಸಿದಂತೆ ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿತು.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಈ ಯೋಜನೆಯಡಿ ಯಾರು ಫಲಾನುಭವಿಗಳು ಎಂಬುದರ ಕುರಿತು ನಿರ್ದಿಷ್ಟವಾಗಿ ಸ್ಪಷ್ಟನೆ ನೀಡುವಂತೆ ಕೇಳಿತು.
ಪಿಎಂ ಕೇರ್ಸ್ ಯೋಜನೆಯಡಿ ಅನಾಥ ಮಕ್ಕಳ ಉನ್ನತ ಶಿಕ್ಷಣಕ್ಕೆ ಧನಸಹಾಯ ನೀಡುವ ನೂತನ ಯೋಜನೆ ಆರಂಭಿಸಲಾಗಿದೆ. ಇದರಡಿ ಫಲಾನುಭವಿಗಳಿಗೆ 23 ವರ್ಷವಾದಾಗ ರೂ 10 ಲಕ್ಷ ಒದಗಿಸಲಾಗುತ್ತದೆ ಮತ್ತು 18 ವರ್ಷ ತುಂಬಿದಾಗ ಆರೋಗ್ಯ ವಿಮೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸುತ್ತಿರುವ ಅಮಿಕಸ್ ಕ್ಯೂರಿ ಗೌರವ್ ಅಗರ್‌ವಾಲ್ ಅವರು ತಿಳಿಸಿದರು. ಆದರೆ ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಯೋಜನೆಯ ರೂಪುರೇಷೆಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ ಎಂದರು.
ಇದೇ ವೇಳೆ, “ಯೋಜನೆಯಡಿ ಯಾರು ಫಲಾನುಭವಿಗಳಾಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ” ಎಂದು ಅಮಿಕಸ್ ಕ್ಯೂರಿ ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ಯಾರು ಎಂದು ನಿಖರವಾಗಿ ವಿವರಿಸುವಂತೆ ಪೀಠ ಕೇಂದ್ರಕ್ಕೆ ಸೂಚಿಸಿತು.
ಇದಲ್ಲದೆ, ಅಮಿಕಸ್ ಜೊತೆ ಸಮನ್ವಯ ಸಾಧಿಸಲು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಈಗಾಗಲೇ ರಾಜ್ಯಗಳು ಕೈಗೊಂಡಿರುವ ಯೋಜನೆಗಳ ಬಗ್ಗೆ ತಿಳಿಸಲು ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ನ್ಯಾಯಾಲಯ ಸೂಚಿಸಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಈ ನಿರ್ದೇಶನ ನೀಡಿದೆ.
ಜೂನ್ 6ರಂದು ಅಮಿಕಸ್ ಕ್ಯೂರಿ ಅವರು ಹತ್ತು ರಾಜ್ಯಗಳ ಅನಾಥ ಮಕ್ಕಳ ಪ್ರಸ್ತುತ ಪರಿಸ್ಥಿತಿ ಕುರಿತು ವಿವರವಾದ ವರದಿ ಸಲ್ಲಿಸಬೇಕು ಎಂದು ತಿಳಿಸಿದ ನ್ಯಾಯಾಲಯ ಜೂನ್ 7ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಪಡಿಸಿದೆ.
ಈ ಹಿಂದೆ ನ್ಯಾಯಾಲಯವು, ತನ್ನ ಆದೇಶಕ್ಕೆ ಕಾಯದೆ ಕೋವಿಡ್‌ನಿಂದ ಅನಾಥರಾದ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ರಾಜ್ಯಗಳಿಗೆ ಸೂಚಿಸಿತ್ತು. ಈ ಮಧ್ಯೆ ಕೋವಿಡ್‌ನಿಂದಾಗಿ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಅನಾಥರಾಗಿರುವುದಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಫಿಡವಿಟ್ ಸಲ್ಲಿಸಿದೆ.