ಕ್ರಿಮಿನಲ್ ದೂರು ಅಥವಾ ಪ್ರಕ್ರಿಯೆಯನ್ನು ಹೈಕೋರ್ಟ್ ವಜಾ ಮಾಡಿದ ಬಳಿಕ ಪೊಲೀಸರು ಮುಕ್ತಾಯ ವರದಿ ಸಲ್ಲಿಸದಂತೆ ಖಾತರಿಪಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶಿಸಿದೆ [ಉತ್ತರಾಖಂಡ ಸರ್ಕಾರ ವರ್ಸಸ್ ಉಮೇಶ್ ಕುಮಾರ್ ಶರ್ಮಾ ಮತ್ತು ಇತರರು].
ಮೂರು ಪ್ರತಿವಾದಿಗಳ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿದ್ದ ಉತ್ತರಾಖಂಡ ಹೈಕೋರ್ಟ್ ಆದೇಶ ಪ್ರಶ್ನಿಸಿ ಅಲ್ಲಿನ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆಯು (ಸಿಆರ್‌ಪಿಸಿ) ಮುಕ್ತಾಯ ವರದಿ ಸಲ್ಲಿಸುವಂತೆ ಹೇಳುವುದಿಲ್ಲ ಎಂದಿದೆ.
“ನಮಗೆ ಆಶ್ಚರ್ಯ ಮತ್ತು ಆಘಾತವಾಗಿರುವುದೇನೆಂದರೆ ಕ್ರಿಮಿನಲ್ ಪ್ರಕ್ರಿಯೆ/ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದ ಬಳಿಕ ಅದನ್ನು ರಾಜ್ಯ ಸರ್ಕಾರ ಪ್ರಶ್ನಿಸಿದ್ದು, ತನಿಖಾಧಿಕಾರಿ ಹೇಗೆ ಮುಕ್ತಾಯ ವರದಿ ಸಲ್ಲಿಸಲು ಸಾಧ್ಯ… ಇಂಥ ಅಭ್ಯಾಸವನ್ನು ರಾಜ್ಯ ಸರ್ಕಾರ ಪಾಲಿಸುತ್ತಿದ್ದರೆ ತಕ್ಷಣ ಅದನ್ನು ನಿಲ್ಲಿಸಬೇಕು. ಹೈಕೋರ್ಟ್ ಕ್ರಿಮಿನಲ್ ಪ್ರಕ್ರಿಯೆ/ಎಫ್‌ಐಆರ್ ರದ್ದುಪಡಿಸಿದರೆ ಸಿಆರ್‌ಪಿಸಿ ಸೆಕ್ಷನ್ 173ರ ಅಡಿ ಅಂತಿಮ ವರದಿ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಈ ಆದೇಶವನ್ನು ಎಲ್ಲಾ ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಬೇಕು ಎಂದು ಪೀಠ ನಿರ್ದೇಶಿಸಿದೆ.
ಉತ್ತರಾಖಂಡ ಸರ್ಕಾರ ಪ್ರಶ್ನಿಸಿದ್ದ ಮೇಲ್ಮನವಿಯಲ್ಲಿನ ಮೂವರು ಪ್ರತಿವಾದಿಗಳ ಪೈಕಿ ಇಬ್ಬರು ಪತ್ರಕರ್ತರಾಗಿದ್ದು, ಅಂದಿನ ಮುಖ್ಯಮಂತ್ರಿ ಟಿ ಎಸ್ ರಾವತ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲಾಗಿತ್ತು.
ಮಾರ್ಚ್ 28ರ ಆದೇಶದಲ್ಲಿ ನ್ಯಾಯಾಲಯವು ತನಿಖಾಧಿಕಾರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆದೇಶ ಮಾಡಿತ್ತು. ಸಂಬಂಧಿತ ವರದಿಯನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಕಳುಹಿಸಿಲ್ಲ. ಅರ್ಹತೆಯ ಆಧಾರದ ಮೇಲೆ ಅದನ್ನು ಸಿದ್ಧಪಡಿಸಿದ್ದು, ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ಅದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿ ತನಿಖಾಧಿಕಾರಿ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಇಂತಹ ಅಭ್ಯಾಸ ಅಗತ್ಯವಿಲ್ಲ, ಪ್ರಶ್ನಿಸಲಾಗಿರುವ ಮುಕ್ತಾಯ ವರದಿಯನ್ನು ಅಸಿಂಧುವೆಂದು ಪರಿಗಣಿಸಿ ನಿರ್ಲಕ್ಷಿಸಲಾಗುವುದು ಎಂದರು.