

ನಿರ್ಮಾಣ ಕಾಮಗಾರಿ ಮತ್ತು ಅಕ್ರಮವಾಗಿ ಮರ ಕಡಿದಿದ್ದರಿಂದ ಕಾರ್ಬೆಟ್ ಹುಲಿ ಮೀಸಲು ಪ್ರದೇಶಕ್ಕೆ ಉಂಟಾಗಿರುವ ಪರಿಸರ ನಷ್ಟವನ್ನು ತುಂಬಿಕೊಡುವಂತೆ ಸುಪ್ರೀಂ ಕೋರ್ಟ್‌ಸೋಮವಾರ ಉತ್ತರಾಖಂಡ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಎಲ್ಲಾ ಅಕ್ರಮ ಕಟ್ಟಡಗಳನ್ನು ಮೂರು ತಿಂಗಳೊಳಗೆ ಕೆಡವುವಂತೆ ಮುಖ್ಯ ವನ್ಯಜೀವಿ ಪಾಲನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್, ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಆದೇಶಿಸಿತು.
ಉತ್ತರಾಖಂಡ ಸರ್ಕಾರ ಅಭಿವೃದ್ಧಿಪಡಿಸಿದ ಪರಿಸರ ಪುನಃಸ್ಥಾಪನೆ ಯೋಜನೆಯ ಮೇಲ್ವಿಚಾರಣೆ ಮಾಡುವಂತೆ ನ್ಯಾಯಾಲಯ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಸಲಹೆ ನೀಡಿತು.
“ಅಕ್ರಮ ಕಟ್ಟಡ ನಿರ್ಮಾಣ ಮತ್ತು ಮರಗಳ ನಾಶದಿಂದ ಆಗಿರುವ ಪರಿಸರ ಹಾನಿಯನ್ನು ಸರಿಪಡಿಸಬೇಕುʼ ಎಂದು ನ್ಯಾಯಾಲಯ ವಿವರಿಸಿತು.
ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಗಳು 2019ರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾವಳಿಗೆ ಅನುಗುಣವಾಗಿ ಇರಬೇಕು ಎಂದು ತಿಳಿಸಿತು.
ಹುಲಿ ಅಭಯಾರಣ್ಯದೊಳಗೆ ಪರಿಸರ ಪ್ರವಾಸೋದ್ಯಮಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಿದ ನ್ಯಾಯಾಲಯ, ಮೂರು ತಿಂಗಳೊಳಗೆ ಹುಲಿ ಸಂರಕ್ಷಣಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ನಿರ್ದೇಶಿಸಿತು. ಹುಲಿ ರಕ್ಷಣಾ ಕೇಂದ್ರಗಳನ್ನು ನಿರ್ಮಿಸಬೇಕು. ಅರಣ್ಯ ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಸೇವೆಗಳ ಹೊರಗುತ್ತಿಗೆಯನ್ನು ನಿಷೇಧಿಸಲಾಗಿದೆ. ಹುಲಿಗಳ ಸಂರಕ್ಷಣೆ ಮಾಡುವ ಸಿಬ್ಬಂದಿಗೆ ಪ್ರೋತ್ಸಾಹದಾಯಕವಾಗಿ ಪದಕಗಳನ್ನು ಪ್ರದಾನ ಮಾಡಬೇಕು. ಸಫಾರಿ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಬೇಕು ಎಂದು ಅದು ಸೂಚಿಸಿದೆ.
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಫರ್ ವಲಯದಲ್ಲಿ ಹುಲಿ ಸಫಾರಿಯನ್ನು ಅನುಮತಿಸಬಹುದು ಆದರೆ ಅದರ ಹೃದಯ ಭಾಗದಲ್ಲಿ ಅಲ್ಲ ಎಂದು ನ್ಯಾಯಾಲಯ ಮಾರ್ಚ್ 2024ರಲ್ಲಿ ಹೇಳಿತ್ತು.
ರಾಷ್ಟ್ರೀಯ ಉದ್ಯಾನ ನಾಶವಾದ ಹಿನ್ನೆಲೆಯಲ್ಲಿ ಆಗ ನ್ಯಾಯಾಲಯ ಉತ್ತರಾಖಂಡದ ಮಾಜಿ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಮತ್ತು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಕಿಶನ್ ಚಂದ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಕ್ರಮವಾಗಿ ಮರಗಳನ್ನು ಕಡೆಯುತ್ತಿರುವುದನ್ನು ನಿರ್ಲಕ್ಷಿಸಲಾಗದು ಎಂದಿದ್ದ ನ್ಯಾಯಾಲಯ ಹಾನಿಯನ್ನು ಅಂದಾಜಿಸಲು ಮತ್ತು ಪರಿಸರ ಪುನರ್ ಸ್ಥಾಪನೆ ಮಾಡಲು ವಿಶೇಷ ಸಮಿತಿ ರಚಿಸುವಂತೆ ಸೂಚಿಸಿತ್ತು.
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಯೋಜಿತ ಪಖ್ರೋ ಹುಲಿ ಸಫಾರಿ ಯೋಜನೆಗೆ ಅನುಮತಿ ನೀಡುವ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿತ್ತು.