ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವಲಾಖ ಅವರ ಶಾಸನಬದ್ಧ ಜಾಮೀನು ಮನವಿ ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೆಲ್ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ ಸಹ ವಜಾಗೊಳಿಸಿದೆ (ಗೌತಮ್ ನವಲಾಖ ವರ್ಸಸ್ ಎನ್‌ಐಎ).
ಸದರಿ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಇಲ್ಲ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಕೆ ಎಂ ಜೋಸೆಫ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ವಿಶೇಷ ನ್ಯಾಯಾಲಯವು ಹಿಂದೆ ಸಾಮಾಜಿಕ ಹೋರಾಟಗಾರ ಗೌತಮ್ ನವಲಾಖ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತಾದರೂ ಅದು ವಿಶೇಷ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣವಿಲ್ಲ ಎಂದು ಫೆಬ್ರವರಿ 8ರ ಆದೇಶದಲ್ಲಿ ಹೇಳಿತ್ತು. ಈ ಸಂಬಂಧ ವಿಶೇಷ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯವು ಜುಲೈ 12, 2020ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಫೆಬ್ರವರಿ 19ರಂದು ನವಲಾಖ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
69 ವರ್ಷದ ನವಲಾಖ ಅವರು ತಲೋಜಾ ಕೇಂದ್ರ ಕಾರಾಗೃಹದಲ್ಲಿದ್ದು, ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 167(2)ರ ಅಡಿ ಗರಿಷ್ಠ 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಿಲ್ಲ; ಹೀಗಾದಾಗ ಆರೋಪಿಯು ಅಯಾಚಿತವಾಗಿ ಜಾಮೀನಿಗೆ (ಡಿಫಾಲ್ಟ್ ಬೇಲ್) ಅರ್ಹರಾಗಿರುತ್ತಾರೆ ಎಂದು ವಾದಿಸಿದ್ದರು.