ಐಜೆಆರ್‌ ವರದಿ ಬಿಡುಗಡೆ: ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಕುಸಿತ ಕಂಡ ಕರ್ನಾಟಕ, ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ

ವರದಿಯನ್ನು ʼಸೆಂಟರ್ ಫಾರ್ ಸೋಷಿಯಲ್ ಜಸ್ಟೀಸ್ʼ, ʼಕಾಮನ್ ಕಾಸ್ʼ, ʼಕಾಮನ್‌ವೆಲ್ತ್‌ ಹ್ಯೂಮನ್ ರೈಟ್ಸ್ ಇನಿಷಿಯೇಟೀವ್ʼ, ʼದಕ್ಷ್ʼ, ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಟಾಟಾ ಟ್ರಸ್ಟ್ ಸಿದ್ಧಪಡಿಸಿದೆ.
ಐಜೆಆರ್‌ ವರದಿ ಬಿಡುಗಡೆ: ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಕುಸಿತ ಕಂಡ ಕರ್ನಾಟಕ, ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ

ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವಿಗೆ ಸಂಬಂಧಿಸಿದ ವಿವಿಧ ಸೂಚ್ಯಂಕಗಳ ವಿಚಾರವಾಗಿ ನ್ಯಾಯ ವಿತರಣೆಯಲ್ಲಿ ಭಾರತದ ಪ್ರಭಾವ ಹೇಗಿದೆ ಎಂಬುದನ್ನು ನಿರ್ಣಯಿಸುವ ಇಂಡಿಯಾ ಜಸ್ಟೀಸ್‌ ವರದಿಯ (ಐಜೆಆರ್‌) ಎರಡನೇ ಆವೃತ್ತಿಯನ್ನು ವರ್ಚುವಲ್‌ ಕಾರ್ಯಕ್ರಮದ ಮೂಲಕ ಗುರುವಾರ ಬಿಡುಗಡೆ ಮಾಡಲಾಗಿದೆ.

ಇಂಡಿಯಾ ಜಸ್ಟೀಸ್ ರಿಪೋರ್ಟ್ (ಐಜೆಆರ್) ಟಾಟಾ ಟ್ರಸ್ಟ್‌ನ ಒಂದು ಉಪಕ್ರಮವಾಗಿದ್ದು, ಸೆಂಟರ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌, ಕಾಮನ್‌ ಕಾಜ್‌, ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟೀವ್‌, ದಕ್ಷ್‌, ಟಿಸ್‌- ಪ್ರಯಾಸ್‌, ವಿಧಿ ಸೆಂಟರ್‌ ಹಾಗೂ ಹೌ ಇಂಡಿಯಾ ಲೀವ್ಸ್‌ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ.

ವರದಿಯ ಪ್ರಕಾರ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಕರ್ನಾಟಕ ಹದಿನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2019ನೇ ಸಾಲಿನಲ್ಲಿ ಅದು ಆರನೇ ಸ್ಥಾನದಲ್ಲಿತ್ತು. -8ರಷ್ಟು ಕುಸಿತ ದಾಖಲಾಗಿದೆ ಎಂದು ವರದಿ ವಿವರಿಸಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು ಉಳಿದ ನಾಲ್ಕು ಸ್ಥಾನಗಳಲ್ಲಿ ತಮಿಳುನಾಡು, ತೆಲಂಗಾಣ, ಪಂಜಾಬ್‌ ಮತ್ತು ಕೇರಳ ಸಾಧನೆ ಮಾಡಿವೆ. ಒಂದು ಕೋಟಿಗಿಂತಲೂ ಕಡಿಮೆ ಜನಸಂಖ್ಯೆಯ ರಾಜ್ಯಗಳಲ್ಲಿ ತ್ರಿಪುರ ಮೊದಲ ಸ್ಥಾನದಲ್ಲಿದ್ದು ಉಳಿದ ಸ್ಥಾನಗಳನ್ನು ಸಿಕ್ಕಿಂ ಮತ್ತು ಗೋವಾ ಅಲಂಕರಿಸಿವೆ.

Also Read
ಎಫ್‌ಎಸ್‌ಎಲ್‌ ವರದಿ ವಿಳಂಬಕ್ಕಾಗಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವುದು 21ನೇ ವಿಧಿಯ ಉಲ್ಲಂಘನೆ: ರಾಜ್ಯ ಹೈಕೋರ್ಟ್

ಇನ್ನು ಐಜೆಆರ್‌ನ 2019ನೇ ಸಾಲಿನ ವರದಿಗೆ ಹೋಲಿಸಿದರೆ ಜೈಲುಗಳ ನಿರ್ವಹಣೆಯಲ್ಲಿ ಮೂರನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಬಜೆಟ್‌ನ ಕಳಪೆ ಬಳಕೆ, ಸಿಬ್ಬಂದಿ ಕೊರತೆ, ತರಬೇತಿ ಹೊಂದಿದ ಕೆಲವೇ ಸಿಬ್ಬಂದಿಯ ಉಪಸ್ಥಿತಿ, ಕಾರ್ಯಾಭಾರ ಹೆಚ್ಚಿರುವ ಕಾರಣದಿಂದ ರಾಜ್ಯಗಳ ಜೈಲುಗಳ ನಿರ್ವಹಣಾ ಸಾಮರ್ಥ್ಯ ಉತ್ತಮವಾಗಿಲ್ಲ ಎಂದು ಹೇಳಲಾಗಿದೆ. ರಾಜಸ್ತಾನ, ತೆಲಂಗಾಣ, ಹಿಮಾಚಲ ಪ್ರದೇಶಗಳು ಜೈಲುಗಳ ನಿರ್ವಹಣೆಯಲ್ಲಿ ಉತ್ತಮ ಪ್ರಗತಿ ದಾಖಲಿಸಿದ್ದು ಕರ್ನಾಟಕ ಸೇರಿದಂತೆ ಕೇರಳ, ಮಿಜೋರಾಂಗಳು ನಿರ್ವಹಣೆಯಲ್ಲಿ ಹಿಂದೆ ಬಿದ್ದಿವೆ.

ಕಾನೂನು ನೆರವು ವಿಚಾರದಲ್ಲಿಯೂ ಕರ್ನಾಟಕ ಹಿಂದುಳಿದಿದೆ. 2019ನೇ ವರದಿಗೆ ಹೋಲಿಸಿದರೆ ಏಳನೇ ಸ್ಥಾನದಲ್ಲಿದ್ದ ರಾಜ್ಯ ಈ ಬಾರಿ ಹದಿನಾರನೇ ಸ್ಥಾನಕ್ಕೆ ಕುಸಿದಿದೆ. ಕೆಲವೇ ಕೆಲವು ಮಹಿಳಾ ವಕೀಲರು, ಕಾನೂನು ಸೇವಾ ಸಂಸ್ಥೆಗಳು ವಿರಳವಾಗಿರುವುದು, ಲೋಕ್‌ ಅದಾಲತ್‌ಗಳಲ್ಲಿ ಕೆಲವೇ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಈ ವಿಚಾರದಲ್ಲಿ ಬಿಹಾರ, ಜಾರ್ಖಂಡ್‌, ತ್ರಿಪುರ ರಾಜ್ಯಗಳು ಆಶಾದಾಯಕ ಬೆಳವಣಿಗೆ ದಾಖಲಿಸಿದ್ದರೆ ಕರ್ನಾಟಕ ಸೇರಿದಂತೆ ಕೇರಳ, ಹಿಮಾಚಲ ಪ್ರದೇಶಗಳು ಕಳಪೆ ಪ್ರದರ್ಶನ ತೋರಿವೆ.

ಆದರೆ ಪೊಲೀಸ್‌ ವ್ಯವಸ್ಥೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನಕ್ಕೆ ಜಿಗಿದಿದೆ. 2019ನೇ ಸಾಲಿನ ವರದಿಯಲ್ಲಿ ಅದು ಆರನೇ ಸ್ಥಾನ ಪಡೆದಿತ್ತು. ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಗಳ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ವೈವಿಧ್ಯತೆ ಕಂಡುಕೊಂಡಿರುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆ ಅದರದ್ದಾಗಿದೆ. ಅಲ್ಲದೆ ರಾಜ್ಯದ ಅಧಿಕಾರಿ ಮತ್ತು ಪೇದೆ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ನೇಮಕವಾಗಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. ಕರ್ನಾಟಕದಂತೆಯೇ ಛತ್ತೀಸ್‌ಗಡ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳು ಕೂಡ ಧನಾತ್ಮಕ ಪ್ರಗತಿ ಸಾಧಿಸಿವೆ. ಆದರೆ ಪಂಜಾಬ್‌, ಮಹಾರಾಷ್ಟ್ರ, ಗೋವಾ ರಾಜ್ಯಗಳ ಪೊಲೀಸ್‌ ಇಲಾಖೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

Also Read
ಪಶ್ಚಿಮ ಘಟ್ಟಗಳ ಕುರಿತಾದ ಕರಡು ಅಧಿಸೂಚನೆ: ಗಾಡ್ಗೀಳ್‌, ರಂಗನ್‌ ಸಮಿತಿ ವರದಿ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ನೇಮಕಾತಿಯಲ್ಲಿ ರಾಜ್ಯ ವೈವಿಧ್ಯತೆ ಕಂಡುಕೊಂಡಿರುವುದನ್ನು ವರದಿಯಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. 2017ರಲ್ಲಿ ಶೇ 7 ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವ ಮಹಿಳೆಯರ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ. ಕಾರಾಗೃಹಗಳಲ್ಲಿನ ಮಹಿಳಾ ಸಿಬ್ಬಂದಿಯ ಸಂಖ್ಯೆ 13%ಗೆ ಜಿಗಿದಿದೆ. 2016ನೇ ಇಸವಿಯಲ್ಲಿ ಆ ಪ್ರಮಾಣ 10% ಇತ್ತು. ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಮಹಿಳೆಯರ ನೇಮಕಾತಿ 29.3%ರಷ್ಟು ಹೆಚ್ಚಳವಾಗಿದೆ. 2017- 18ರಲ್ಲಿ ಆ ಪ್ರಮಾಣ 26.5%ರಷ್ಟಿತ್ತು ಎಂಬ ವಿವರಗಳನ್ನು ಕೂಡ ದಾಖಲಿಸಲಾಗಿದೆ.

ಉಳಿದಂತೆ ವರದಿಯ ಪ್ರಮುಖ ಅಂಶಗಳು ಹೀಗಿವೆ:

  • ಭಾರತದ ನ್ಯಾಯಾಧೀಶರಲ್ಲಿ ಮಹಿಳೆಯರ ಪಾಲು ಕೇವಲ 29%. ದೇಶದ ಐದು ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳಿಲ್ಲ.

  • ದೇಶದ ಮೂರನೇ ಎರಡು ಭಾಗದಷ್ಟು ಸೆರೆವಾಸಿಗಳು ವಿಚಾರಣಾಧೀನ ಕೈದಿಗಳಾಗಿದ್ದಾರೆ.

  • ದೇಶದ ಶೇ 80% ಮಂದಿ ಕಾನೂನು ನೆರವು ಪಡೆಯಲು ಅರ್ಹರಾಗಿದ್ದರೂ ಕಳೆದ 25 ವರ್ಷಗಳಲ್ಲಿ ಅಂದರೆ 1995 ರಿಂದ ಈವರೆಗೆ ಕೇವಲ 1.5 ಕೋಟಿ ಮಂದಿ ಅಂತಹ ಸಹಾಯ ಪಡೆದಿದ್ದಾರೆ.

Related Stories

No stories found.
Kannada Bar & Bench
kannada.barandbench.com