ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ (2019) ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ಡಿಎಂಕೆ ನಾಯಕಿ ಕನಿಮೊಳಿ ಕರುಣಾನಿಧಿ ಅವರು ಆಯ್ಕೆಯಾಗಿರುವುದನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ [ಕನಿಮೊಳಿ ಕರುಣಾನಿಧಿ ಮತ್ತು ಎ ಸಂತಾನ ಕುಮಾರ್ ನಡುವಣ ಪ್ರಕರಣ].
ಕನಿಮೊಳಿ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ವಜಾಗೊಳಿಸಿತು. ಚುನಾವಣಾ ಅರ್ಜಿಯನ್ನು ರದ್ದುಪಡಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಡಿಎಂಕೆ ನಾಯಕಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಮೇಲ್ಮನವಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ, (ಡಿಎಂಕೆ ರಾಜ್ಯಸಭಾ ಸದಸ್ಯ) ಪಿ ವಿಲ್ಸನ್, ಆಸ್ತಿ ಕುರಿತಾದ ಮಾಹಿತಿ ಬಹಿರಂಗಪಡಿಸುವ ಅಫಿಡವಿಟ್‌ನಲ್ಲಿ ಕನಿಮೊಳಿ ಅವರು ತಮ್ಮ ಪತಿಯ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿಲ್ಲ ಎಂದು ತಕರಾರು ಎತ್ತಿರುವ ಪ್ರಮುಖ ಚುನಾವಣಾ ಅರ್ಜಿಯನ್ನು ಮತದಾರರೊಬ್ಬರು ಸಲ್ಲಿಸಿದ್ದಾರೆ. ಕನಿಮೊಳಿ ಪತಿ ವಿದೇಶಿ ಪ್ರಜೆಯಾಗಿದ್ದು, ಅಂತಹ ಕಾರ್ಡ್ ಅಥವಾ ಭಾರತದಲ್ಲಿನ ಚಟುವಟಿಕೆಗಳಿಂದ ಯಾವುದೇ ಆದಾಯವನ್ನು ಅವರು ಪಡೆಯುತ್ತಿಲ್ಲ. ಅಲ್ಲದೆ ಪ್ರತಿವಾದಿಗಳು ತಮ್ಮ ಆರೋಪಗಳನ್ನು ಸಾಬೀತುಪಡಿಸುತ್ತಿಲ್ಲ ಎಂದಿದ್ದರು.
ಸುಪ್ರೀಂಕೋರ್ಟ್ 2020ರಜನವರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಮೊಳಿ ವಿರುದ್ಧದ ವಿಚಾರಣೆಗೆ ಮತ್ತು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.