ಯುಜಿಸಿ-ಎನ್ಇಟಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪರೀಕ್ಷೆಯನ್ನು ಈಗಾಗಲೇ ಆಗಸ್ಟ್ 21ಕ್ಕೆ ಮರು ನಿಗದಿ ಮಾಡಿರುವುದರಿಂದ, ಈಗ ಹಸ್ತಕ್ಷೇಪ ಮಾಡಿದರೆ ಅನಿಶ್ಚಿತತೆ ಮತ್ತು ಅವ್ಯವಸ್ಥೆ ಹೆಚ್ಚಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
Supreme Court and UGC NET 2024
Supreme Court and UGC NET 2024
Published on

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್) ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಪರ್ವೀನ್ ದಾಬಸ್ ಮತ್ತಿತರರು ಹಾಗೂ ಶಿಕ್ಷಣ ಸಚಿವಾಲಯ ಇನ್ನಿತರರ ನಡುವಣ ಪ್ರಕರಣ].

ಪರೀಕ್ಷೆಯನ್ನು ಈಗಾಗಲೇ ಆಗಸ್ಟ್ 21ಕ್ಕೆ ಮರು ನಿಗದಿ ಮಾಡಿರುವುದರಿಂದ, ಈಗ ಹಸ್ತಕ್ಷೇಪ ಮಾಡಿದರೆ ಅನಿಶ್ಚಿತತೆ ಮತ್ತು ಅವ್ಯವಸ್ಥೆ ಹೆಚ್ಚಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

Also Read
ಅಂತಾರಾಜ್ಯ ದೂರಶಿಕ್ಷಣಕ್ಕೆ ನಿಷೇಧ: ವಿನಾಯಿತಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಯುಜಿಸಿ ಮೊರೆ

ಜೂನ್ 18ರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಈಗ ಆಗಸ್ಟ್ 21 ರಂದು ಪರೀಕ್ಷೆ  ನಿಗದಿಯಾಗಿದ್ದು ಇದೀಗ ಪರೀಕ್ಷೆ ರದ್ದತಿಗೆ ಮನವಿ ಸಲ್ಲಿಸಲಾಗಿದೆ. ಪರೀಕ್ಷೆ ರದ್ದಾಗಿ 2 ತಿಂಗಳು ಕಳೆದಿವೆ. ಅರ್ಜಿ ಪುರಸ್ಕರಿಸಿದರೆ ಅನಿಶ್ಚಿತತೆ ಹೆಚ್ಚುತ್ತದೆ. 9 ಲಕ್ಷ ಮಂದಿ ಆಗಸ್ಟ್ 21 ರಂದು ಪರೀಕ್ಷೆಗೆ ಹಾಜರಾಗುತ್ತಿದ್ದು ತಡವಾಗಿರುವ ಈ ಹಂತದಲ್ಲಿ ಪರೀಕ್ಷೆ ರದ್ದತಿ ಪ್ರಶ್ನಿಸುವಂತಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ವೈಫಲ್ಯದ ನಂತರ ಸರ್ಕಾರ ದುಪ್ಪಟ್ಟು ಎಚ್ಚರಿಕೆ ವಹಿಸಿದ ಪರಿಣಾಮ, ಪರೀಕ್ಷೆ ರದ್ದಾಯಿತು ಎಂದ ನ್ಯಾಯಾಲಯ ಈ ಪ್ರಕ್ರಿಯೆ ಸದ್ಯಕ್ಕೆ ಮುಂದುವರೆಯಲಿ ಎಂಬುದಾಗಿ ತಿಳಿಸಿತು.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಜೂನ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಯುಜಿಸಿ-ನೆಟ್ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜುಲೈನಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ವಕೀಲರು ಇದನ್ನು ಸಲ್ಲಿಸಿದ್ದಾರೆಯೇ ವಿನಾ  ರದ್ದತಿಯಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಲ್ಲ ಎಂದಿದ್ದ ಪೀಠ ಪರೀಕ್ಷೆ ರದ್ದತಿಯಿಂದ ಬಾಧಿತರಾದ ಯಾವುದೇ ಅಭ್ಯರ್ಥಿ ಪರಿಹಾರ ಪಡೆಯಲು ಅಡ್ಡಿ ಇಲ್ಲ ಎಂದಿತ್ತು.

ದೇಶದಲ್ಲಿ ಡಾಕ್ಟರೇಟ್  ಕೋರ್ಸ್‌ಗಳಿಗೆ ನಿರ್ಣಾಯಕವಾದ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಸೀನಿಯರ್ ರಿಸರ್ಚ್ ಫೆಲೋಶಿಪ್ (ಎಸ್‌ಆರ್‌ಎಫ್) ಸೇರಿದಂತೆ ಸಂಶೋಧನಾ ಅವಕಾಶಗಳನ್ನು ಮುಂದುವರಿಸಲು ಅಭ್ಯರ್ಥಿಗಳ ಅರ್ಹತೆ ಏನು ಎಂಬುದನ್ನು ಯುಜಿಸಿ ನೆಟ್‌ ಪರೀಕ್ಷೆ ನಿರ್ಧರಿಸುತ್ತದೆ.

Also Read
ನೀಟ್‌ ಯುಜಿ: ಎನ್‌ಟಿಎ, ಕೇಂದ್ರ ಪದೇ ಪದೇ ನಿಲುವು ಬದಲಿಸುವುದನ್ನು ನಿಲ್ಲಿಸಬೇಕು; ದೋಷ ಸರಿಪಡಿಸಬೇಕು: ಸುಪ್ರೀಂ

ಎನ್‌ಟಿಎ ನಡೆಸುವ ಪರೀಕ್ಷೆಯನ್ನು ಈ ಹಿಂದೆ ಜೂನ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಪರೀಕ್ಷೆಯ ಪತ್ರಿಕೆ ಸೋರಿಕೆಯಾಗಿದೆ ಎಂದು ಕೆಲವು ಗುಪ್ತಚರ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ  ಪರೀಕ್ಷೆ ಆರಂಭಕ್ಕೂ ಕೆಲ ಸಮಯದ ಮೊದಲು ರದ್ದುಗೊಳಿಸಲಾಗಿತ್ತು.

ಮತ್ತೊಂದೆಡೆ ಸಾಮೂಹಿಕ ಪ್ರಶ್ನೆಪತ್ರಿಕೆ ಸೋರಿಕೆ, ವಿವಿಧ ಅಕ್ರಮಗಳಿಂದಾಗಿ ಪ್ರಸಕ್ತ ಸಾಲಿನ ನೀಟ್‌ ಪದವಿ ಪ್ರವೇಶ ಪರೀಕ್ಷೆ (ನೀಟ್‌ ಯುಜಿ 2024) ವಿವಾದದ ಕೇಂದ್ರ ಬಿಂದುವಾಗಿದ್ದನ್ನು ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳು ದೇಶದ ವಿವಿಧ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ನೀಟ್‌ ಯುಜಿ ಪರೀಕ್ಷೆ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರೆಸಿದೆ.  

Kannada Bar & Bench
kannada.barandbench.com