ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಈ ಹಿಂದೆ ಸಲ್ಲಿಸಲಾಗಿದ್ದ ವಿಶೇಷ ಅನುಮತಿ ಅರ್ಜಿಯನ್ನು 2020ರಲ್ಲಿ ನ್ಯಾಯಾಲಯ ವಜಾಗೊಳಿತ್ತು. ಅರ್ಜಿದಾರರ ಮನವಿ ಮೇರೆಗೆ ಶುಕ್ರವಾರ ಅರ್ಜಿಯನ್ನು ಮರುಸ್ಥಾಪಿಸಿದ ಪೀಠ ಅರ್ಹತೆಯ ಆಧಾರದ ಮೇಲೆ ಅದನ್ನು ವಜಾಗೊಳಿಸಿತು.
Rahul Gandhi with Supreme Court
Rahul Gandhi with Supreme Court Rahul Gandhi (Facebook)
Published on

ಕೇರಳದ ವಯನಾಡ್ ಕ್ಷೇತ್ರದಿಂದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ (ಸರಿತಾ ನಾಯರ್ ಮತ್ತು ರಾಹುಲ್ ಗಾಂಧಿ ನಡುವಣ ಪ್ರಕರಣ).

ವಯನಾಡ್ ಮತ್ತು ಎರ್ನಾಕುಲಂನ ಲೋಕಸಭೆ ಚುನಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಕೇರಳ ಹೈಕೋರ್ಟ್‌ ಅಕ್ಟೋಬರ್ 31, 2019ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸರಿತಾ ನಾಯರ್ ಎನ್ನುವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ವಜಾಗೊಳಿಸಿತು.

ವಕೀಲರು ಹಾಜರಾಗದಿದ್ದಕ್ಕಾಗಿ ಅವರ ವಿಶೇಷ ಅನುಮತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ 2020ರಲ್ಲಿ ವಜಾಗೊಳಿಸಿತ್ತು. ನಂತರ ಸರಿತಾ ಪರ ವಕೀಲರು ಅರ್ಜಿಯನ್ನು ಮರುಸ್ಥಾಪಿಸುವಂತೆ ಕೋರಿದ್ದರು. ಶುಕ್ರವಾರ ಅರ್ಜಿಯನ್ನು ಮರುಸ್ಥಾಪಿಸಿದ ಪೀಠ ಅರ್ಹತೆಯ ಆಧಾರದ ಮೇಲೆ ಅದನ್ನು ವಜಾಗೊಳಿಸಿತು.

Also Read
ಕೆಜಿಎಫ್‌ ಕೃತಿಸ್ವಾಮ್ಯ ಉಲ್ಲಂಘನೆ: ರಾಹುಲ್‌ ಹಾಗೂ ಇತರ ಕಾಂಗ್ರೆಸ್‌ ನಾಯಕರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಸೋಲಾರ್ ಹಗರಣಕ್ಕೆ ಸಂಬಂಧಿಸಿದ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಿ ಶಿಕ್ಷೆಗೆ ಗುರಿಪಡಿಸಿದ ಹಿನ್ನೆಲೆಯಲ್ಲಿ ವಯನಾಡ್ ಮತ್ತು ಎರ್ನಾಕುಲಂನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸರಿತಾ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು 2019ರಲ್ಲಿ ತಿರಸ್ಕರಿಸಿದ್ದರು.

ಇದನ್ನು ಪ್ರಶ್ನಿಸಿ ಸರಿತಾ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್‌ ಕೂಡ ಪರಿಗಣಿಸಿರಲಿಲ್ಲ. ಪ್ರಕರಣಗಳಲ್ಲಿನ ಶಿಕ್ಷೆಯನ್ನು ಮಾತ್ರ ಅಮಾನತುಗೊಳಿಸಲಾಗಿದೆ ಎಂದು ಹೈಕೋರ್ಟ್‌ ತಿಳಿಸಿತ್ತು. ರಾಹುಲ್‌ ಅವರು ಕೇರಳದ ವಯನಾಡ್ ಕ್ಷೇತ್ರದಲ್ಲಿ ದಾಖಲೆಯ ಮತ ಗಳಿಸಿ ಜಯ ಸಾಧಿಸಿದ್ದರು. ತಮ್ಮ ಸಮೀಪದ ಎದುರಾಳಿ ಸಿಪಿಐ ಪಕ್ಷದ ಪಿ ಪಿ ಸುನೀರ್‌ ಅವರನ್ನು 274,597 ಮತಗಳ ಅಂತರದಿಂದ ಅವರು ಸೋಲಿಸಿದ್ದರು.

ಸೋಲಾರ್ ಹಗರಣದಲ್ಲಿ ಸರಿತಾ ತಪ್ಪಿತಸ್ಥರಾಗಿದ್ದು, ಪೆರುಂಬವೂರ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹10,000 ದಂಡವನ್ನು ವಿಧಿಸಿತ್ತು

Kannada Bar & Bench
kannada.barandbench.com