ಪಿಐಎಲ್ ನ ಅಪಹಾಸ್ಯ: ನೇತಾಜಿ ಜನ್ಮದಿನದಂದು ರಾಷ್ಟ್ರೀಯ ರಜೆ ಘೋಷಿಸಲು ಕೋರಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ರಜೆ ನೀಡುವ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ವಿನಾ ಸುಪ್ರೀಂ ಕೋರ್ಟ್ ವ್ಯಾಪ್ತಿಗಲ್ಲ ಎಂದು ತಿಳಿಸಿದ ಪೀಠ.
Statue of Netaji Subash Chandra Bose
Statue of Netaji Subash Chandra Bose

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ʼಪರಾಕ್ರಮ ದಿವಸʼದಂದು ರಾಷ್ಟ್ರೀಯ ರಜಾದಿನ ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್)  ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು ಈ ಮನವಿಯು ಪಿಐಎಲ್‌ನ  ನ್ಯಾಯವ್ಯಾಪ್ತಿಯ ಅಪಹಾಸ್ಯವಲ್ಲದೆ ಮತ್ತೇನೂ ಅಲ್ಲ ಮತ್ತು ರಜೆ ನೀಡುವ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ವಿನಾ ಸುಪ್ರೀಂ ಕೋರ್ಟ್‌ ವ್ಯಾಪ್ತಿಗಲ್ಲ ಎಂದು ಅಭಿಪ್ರಾಯಪಟ್ಟಿದೆ.

"ಇದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ಸುಪ್ರೀಂ ಕೋರ್ಟ್ ಇದರಲ್ಲಿ ಏನು ಮಾಡಬಲ್ಲದು? ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ನೀವು ಕೂಡ ವಕೀಲರು" ಎಂದು ಪೀಠ ಹೇಳಿದೆ.

ದೇಶದಲ್ಲಿ ಮಕ್ಕಳ ದಿನಾಚರಣೆ ಮತ್ತು ಬುದ್ಧ ಪೂರ್ಣಿಮೆಯಂತಹ ದಿನಾಚರಣೆಗಳನ್ನು ಆಚರಿಸುವಾಗ ನೇತಾಜಿ ಅವರ ಜನ್ಮದಿನವನ್ನು ಏಕೆ ಆಚರಿಸಬಾರದು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಪ್ರಶ್ನಿಸಿದರು.

Also Read
ಬೋಸ್‌ ಕಣ್ಮರೆ ಸತ್ಯ ಶೋಧನಾ ಸಮಿತಿ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಕೆ ಮುಖರ್ಜಿ ನಿಧನ

ಆಗ ನ್ಯಾಯಾಲಯ, ರಜೆ ಬಯಸುವ ಬದಲು ಬೋಸ್ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ರೀತಿಯಲ್ಲಿ ಶ್ರಮಿಸುವ ಮೂಲಕ ಅವರ ದಿನವನ್ನು ಆಚರಿಸಲು ಕಿವಿಮಾತು ಹೇಳಿತು. ಅರ್ಜಿದಾರರು ಪಿಐಎಲ್ ನ್ಯಾಯವ್ಯಾಪ್ತಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

"ಸ್ವಾತಂತ್ರ್ಯಕ್ಕಾಗಿ ಅವರು ಹೇಗೆ ಶ್ರಮಿಸಿದರೋ ಅದೇ ರೀತಿ ನೀವು ಶ್ರಮವಹಿಸಿ (ಅವರ ಜನ್ಮದಿನವನ್ನು) ಆಚರಿಸಬಹುದ ... ನೀವು ಪಿಐಎಲ್ ನ್ಯಾಯವ್ಯಾಪ್ತಿಯನ್ನು ಅಪಹಾಸ್ಯ ಮಾಡುತ್ತಿದ್ದೀರಿ. ನಿಮಗೆ ನೀಲಿ ಆಕಾಶ ಇಷ್ಟವಾಗಿದೆಯೆಂದು ನೀಲಿ ಆಕಾಶ ಬೇಕು ಎಂದು ಪಿಐಎಲ್‌ ಹಾಕುತ್ತೀರಾ? ಕೋರ್ಟ್‌ ಏನು ಮಾಡಬಹುದು ಎಂಬುದನ್ನು ಕನಿಷ್ಠವಾದರೂ ಯೋಚಿಸಿ. ನಿಮ್ಮ ಅರ್ಜಿಗಾಗಿ ನಾವು ವ್ಯಯಿಸಿದ 3 ನಿಮಿಷದಲ್ಲಿ ಮತ್ತೊಬ್ಬ ದಾವೆದಾರನಿಗೆ ಪರಿಹಾರ ನೀಡಬಹುದಿತ್ತು. ಕ್ಷಮಿಸಿ, ಅರ್ಜಿ ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ನುಡಿಯಿತು.  

Related Stories

No stories found.
Kannada Bar & Bench
kannada.barandbench.com