Supreme Court
Supreme Court

ಯುಪಿಎಸ್‌ಸಿ ಪರೀಕ್ಷೆ ಬರೆಯಲು ಹೆಚ್ಚುವರಿ ಅವಕಾಶ ಕೋರಿದ್ದ ಕೊನೆಯ ಯತ್ನದ ಅಭ್ಯರ್ಥಿಗಳ ಮನವಿ ವಜಾಗೊಳಿಸಿದ ಸುಪ್ರೀಂ

ಕೋವಿಡ್‌ ಸಾಂಕ್ರಾಮಿಕತೆ ಸೃಷ್ಟಿಸಿದ ತೊಂದರೆಗಳಿಂದಾಗಿ ಯುಪಿಎಸ್‌ಸಿ ಸಿಎಸ್‌ಇ ಪೂರ್ವಭಾವಿ 2020 ಪರೀಕ್ಷೆ ಬರೆಯಲಾಗಲಿಲ್ಲ ಎಂದು ಅಳಲು ತೋಡಿಕೊಂಡು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
Published on

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳನ್ನು ಅಂತಿಮ ಪ್ರಯತ್ನವಾಗಿ ಬರೆದಿದ್ದ ಅಭ್ಯರ್ಥಿಗಳು ಪ್ರಸಕ್ತ ವರ್ಷ ಪರೀಕ್ಷೆ ಬರೆಯಲು ಹೆಚ್ಚುವರಿ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ಇಂದು ಮಲ್ಹೋತ್ರಾ ಮತ್ತು ಅಜಯ್‌ ರಸ್ತೋಗಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ತೀರ್ಪು ನೀಡಿದೆ. ಕೋವಿಡ್‌ ಸಾಂಕ್ರಾಮಿಕತೆ ಸೃಷ್ಟಿಸಿದ ತೊಂದರೆಗಳಿಂದಾಗಿ ಯುಪಿಎಸ್‌ಸಿ ಸಿಎಸ್‌ಸಿ ಪೂರ್ವಭಾವಿ 2020 ಪರೀಕ್ಷೆ ಬರೆಯಲಾಗಲಿಲ್ಲ. ಈ ಹಿನ್ನೆಲೆಯಲ್ಲಿ 2021ರ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗಿಯಾಗಲು ಹೆಚ್ಚುವರಿ ಅವಕಾಶ ಕಲ್ಪಿಸುವಂತೆ ಕೋರಿ ಅವರು ಮನವಿ ಸಲ್ಲಿಸಿದ್ದರು.

Justices AM Khanwilkar, Indu Malhotra and Ajay Rastogi
Justices AM Khanwilkar, Indu Malhotra and Ajay Rastogi

ಕಳೆದ ವರ್ಷ ಸಿಇಸಿ-2020 ಪರೀಕ್ಷೆಯನ್ನು ಅಂತಿಮ ಅವಕಾಶವಾಗಿ ಎದುರಿಸಿದ್ದ ಅಭ್ಯರ್ಥಿಗಳಿಗೆ ಪ್ರಸಕ್ತ ವರ್ಷಕ್ಕೆ ಸೀಮಿತಗೊಳಿಸಿ ಸಿಇಸಿ-2021 ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದು. ಆದರೆ, ಸಿಇಸಿ-2021 ಬರೆಯಲು ಅವರು ತಮ್ಮ ನಿರ್ದಿಷ್ಟ ವಯೋಮಿತಿ ಮೀರಿರಬಾರದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಈಚೆಗೆ ತಿಳಿಸಿತ್ತು.

“ವಿನಾಯಿತಿಯು ನಿರ್ದಿಷ್ಟವಾಗಿ ಸಿಎಸ್‌ಇ-2021ರ ಪರೀಕ್ಷೆಗೆ ಸೀಮಿತವಾಗಿರುತ್ತದೆ. ಸಿಎಸ್‌ಇ-2020 ಪರೀಕ್ಷೆಯನ್ನು ಅಂತಿಮ ಅವಕಾಶವಾಗಿ ಎದುರಿಸಿದ್ದವರಿಗೆ ಮಾತ್ರ ಮತ್ತೊಂದು ಅವಕಾಶ ನೀಡಲಾಗುತ್ತಿದ್ದು, ಸಿಎಸ್‌ಇ-2021ರಲ್ಲಿ ಪರೀಕ್ಷೆ ಬರೆಯಲು ವಯೋಮಿತಿ ಮೀರಿಲ್ಲದ ಪಕ್ಷದಲ್ಲಿ ಅವಕಾಶ ದೊರೆಯಲಿದೆ," ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಸಿಎಸ್‌ಇ-2021ರ ಪರೀಕ್ಷೆಗೆ ಮಾತ್ರ ಈ ವಿನಾಯಿತಿ ಮೀಸಲಾಗಿದ್ದು, ಇದನ್ನು ದೃಷ್ಟಾಂತವನ್ನಾಗಿ ಪರಿಗಣಿಸಬಾರದು ಎಂದು ಕೇಂದ್ರ ಹೇಳಿತ್ತು

ಅವಕಾಶಗಳು ಮುಗಿಯದೆ ಇರುವ ಅಭ್ಯರ್ಥಿಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇಂತಿಷ್ಟು ಬಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಎಂದು ಅವಕಾಶಗಳನ್ನು ನಿಗದಿಗೊಳಿಸಿರುತ್ತದೆ.

Also Read
ಅಂತಿಮ ಬಾರಿ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದವರಿಗೆ ಮತ್ತೊಂದು ಅವಕಾಶ; ವಯೋಮಿತಿ ಮೀರಿದ್ದರೆ ಇಲ್ಲ: ಕೇಂದ್ರ ಸರ್ಕಾರ

ವಯೋಮಿತಿ ಮೀರಿರುವ ಅಭ್ಯರ್ಥಿಗಳಿಗೆ ವಿನಾಯಿತಿ ಕಲ್ಪಿಸದೇ ಇರುವುದು ಅನಿಯಂತ್ರಿತ ಮತ್ತು ಅಸಮಂಜಸ ಕ್ರಮ ಎಂದು ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲರಾದ ಶ್ಯಾಮ್‌ ದಿವಾನ್‌, ಸಿ ಯು ಸಿಂಗ್‌ ಮತ್ತು ಪಿ ಎಸ್‌ ನರಸಿಂಹ ವಾದಿಸಿದರು. ದುರ್ಬಲ ಸಮುದಾಯದ ಅಭ್ಯರ್ಥಿಗಳಿಗೆ ವಯೋಮಿತಿ ಮೀರಿರುವ ವಿಚಾರವು ಸಮಸ್ಯೆ ಉಂಟು ಮಾಡಿದೆ ಎಂದು ಪಿ ಎಸ್‌ ನರಸಿಂಹ ಹೇಳಿದ್ದಾರೆ. “ಕೋವಿಡ್‌ ಪರಿಸ್ಥಿತಿಯು ಗಣನೀಯವಾಗಿ ಈ ಅಭ್ಯರ್ಥಿಗಳಿಗೆ ಸಮಸ್ಯೆ ಉಂಟು ಮಾಡಿದೆ. ಈಗ ಐಎಎಸ್‌ ಆಕಾಂಕ್ಷೆಗಳೂ ಮುಗಿದಿವೆ. ಈಗ ಅವರು ಸಂಪೂರ್ಣವಾಗಿ ಹೊರ ದೂಡಲ್ಪಟ್ಟಿದ್ದಾರೆ” ಎಂದು ನರಸಿಂಹ ಹೇಳಿದರು.

ಹಿರಿಯ ವಕೀಲ ಸಿ ಯು ಸಿಂಗ್‌ ಅವರು ಹಿಂದೆ ನೀಡಲಾದ ಅವಕಾಶಗಳ ಕುರಿತು ಪೀಠಕ್ಕೆ ವಿವರಿಸಿದರು. ಇದಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ತಕರಾರು ವ್ಯಕ್ತಪಡಿಸಿದರು. ಕೋವಿಡ್‌ನಿಂದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ ಕೊನೆಯ ಅವಕಾಶದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದರೆ ಇತರೆ ಅಭ್ಯರ್ಥಿಗಳು ಅವಕಾಶಕ್ಕೆ ಬೇಡಿಕೆ ನೀಡಬಹುದು. ಇದು ಮುಗಿಯದ ಪ್ರಕ್ರಿಯೆಯಾಗಲಿದೆ ಎಂದರು. ವಕೀಲೆ ಅನುಶ್ರೀ ಕಪಾಡಿಯಾ ಅವರು ನೊಂದ ಅಭ್ಯರ್ಥಿಗಳ ಪರ ಮನವಿ ಸಲ್ಲಿಸಿದ್ದರು. ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಅರ್ಹತೆಯ ಆಧಾರದ ಮೇಲೆ ಪರಿಗಣಿಸಿ, ಮನವಿಯನ್ನು ವಜಾಗೊಳಿಸಿದೆ.

Kannada Bar & Bench
kannada.barandbench.com