ಶಾಹೀನ್ ಬಾಗ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

"ಕೆಲ ಸ್ವಯಂಪ್ರೇರಿತ ಪ್ರತಿಭಟನೆಗಳ ಹೊರತಾಗಿ ದೀರ್ಘಕಾಲೀನ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆ ವೇಳೆ, ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರುವಂತೆ ಸಾರ್ವಜನಿಕ ಸ್ಥಳ ಆಕ್ರಮಿಸುವುದನ್ನು ಮುಂದುವರೆಸುವಂತಿಲ್ಲ," ಎಂದು ಪೀಠ ಅಭಿಪ್ರಾಯಪಟ್ಟಿತು.
Shaheen Bagh
Shaheen Bagh

ಶಾಹೀನ್ ಬಾಗ್ ಪ್ರತಿಭಟನೆ ಕುರಿತು 2020ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ದೀರ್ಘಕಾಲೀನ ಪ್ರತಿಭಟನೆಗಳು ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರುವಂತೆ ಸಾರ್ವಜನಿಕ ಸ್ಥಳಗಳನ್ನು ನಿರಂತರವಾಗಿ ಆಕ್ರಮಿಸಿಕೊಳ್ಳುವಂತಿರಬಾರದು ಎಂಬ ತನ್ನ ನಿಲುವನ್ನು ಅದು ಪುನರುಚ್ಚರಿಸಿದೆ. (ಕನಿಜ್ ಫಾತಿಮಾ ಮತ್ತು ಪೊಲೀಸ್ ಆಯುಕ್ತರು).

ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟ ಕಾಲ ಆಕ್ರಮಿಸುವಂತಿಲ್ಲ ಎಂದು 2020ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಹನ್ನೆರಡು ವ್ಯಕ್ತಿಗಳು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ತಿರಸ್ಕರಿಸಿತು. ಎಲ್ಲೆಡೆ ಮತ್ತು ಯಾವುದೇ ಸಮಯದಲ್ಲಿ ಪ್ರತಿಭಟಿಸುವ ಹಕ್ಕು ಇರಬಾರದು ಎಂದು ನ್ಯಾಯಾಲಯ ತೀರ್ಪು ನೀಡಿತು.

"ಕೆಲವು ಸ್ವಯಂಪ್ರೇರಿತ ಪ್ರತಿಭಟನೆಗಳ ಹೊರತಾಗಿ ದೀರ್ಘಕಾಲದ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆಯ ಸಂದರ್ಭದಲ್ಲಿ, ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರುವಂತೆ ಸಾರ್ವಜನಿಕ ಸ್ಥಳ ಆಕ್ರಮಿಸುವುದನ್ನು ಮುಂದುವರೆಸುವಂತಿಲ್ಲ" ಎಂದು ಪೀಠ ಇತ್ತೀಚೆಗೆ ಅಭಿಪ್ರಾಯಪಟ್ಟಿತು.

Also Read
ದೆಹಲಿ ಗಲಭೆ ಹಿಂದೂ ವಿರೋಧಿಯಾಗಿರಲಿಲ್ಲ, ಎಲ್ಲಾ ಸಮುದಾಯಗಳ ಮೇಲೆ ಅದರ ಪರಿಣಾಮ ಉಂಟಾಯಿತು: ದೆಹಲಿ ನ್ಯಾಯಾಲಯ

ದಕ್ಷಿಣ ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯಿದೆ ಅಥವಾ ಸಿಎಎ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕಳೆದ ಅಕ್ಟೋಬರ್‌ನಲ್ಲಿ ತೀರ್ಪು ನೀಡಿತ್ತು. 2019ರ ಡಿಸೆಂಬರ್‌ನಲ್ಲಿ 15ರಂದು ಆರಂಭವಾಗಿದ್ದ ಪ್ರತಿಭಟನೆ ಕೋವಿಡ್‌ ಕಾರಣಕ್ಕಾಗಿ ಮಾರ್ಚ್ 24 ರಂದು ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಬಳಿಕವಷ್ಟೇ ಅಂತ್ಯಗೊಂಡಿತ್ತು. ಪ್ರತಿಭಟನೆಯಿಂದಾಗಿ ಶಾಹೀನ್‌ಬಾಗ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪರಿಣಾಮ ದೆಹಲಿ ನಿವಾಸಿ ಅಮಿತ್‌ ಸಾಹ್ನಿ ಎಂಬುವವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್‌ 7ರಂದು ನ್ಯಾಯಾಲಯ ಪ್ರಕರಣದ ತೀರ್ಪು ನೀಡಿತ್ತು.

"ಸಾರ್ವಜನಿಕ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಈ ರೀತಿಯಾಗಿ ಅದರಲ್ಲಿಯೂ ಅನಿರ್ದಿಷ್ಟಾವಧಿಯವರೆಗೆ ಆಕ್ರಮಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ನಿಸ್ಸಂದಿಗ್ಧವಾಗಿ ಸ್ಪಷ್ಟಪಡಿಸಬೇಕು. ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯಗಳು ಜೊತೆ ಜೊತೆಗೆ ಸಾಗುತ್ತವೆ, ಆದರೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರದರ್ಶನಗಳು ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ನಡೆಯಬೇಕು" ಎಂದು ಸುಪ್ರೀಂಕೋರ್ಟ್‌ ತನ್ನ ಅಕ್ಟೋಬರ್ 2020ರ ತೀರ್ಪಿನಲ್ಲಿ ಹೇಳಿತ್ತು.

ಸಂವಿಧಾನದ 137ನೇ ಪರಿಚ್ಛೇದದ ಅಡಿಯಲ್ಲಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯಲ್ಲಿ ಐದು ನೆಲೆಗಳಲ್ಲಿ ಅಕ್ಟೋಬರ್‌ ತಿಂಗಳ ಆದೇಶವನ್ನು ಪ್ರಶ್ನಿಸಲಾಗಿತ್ತು. ತೀರ್ಪಿನಿಂದಾಗಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆತಿದ್ದು ಇದು ದುರ್ಬಳಕೆಯಾಗುವ ಸಾಧ್ಯತೆಗಳಿವೆ ಎಂಬುದು ಅರ್ಜಿದಾರರ ಪ್ರಧಾನ ಕಳವಳವಾಗಿತ್ತು.

Also Read
ಸಿಎಎ ವಿರೋಧಿ ಪ್ರತಿಭಟನೆ: ಮಂಗಳೂರು ಗಲಭೆಯ ಆಪಾದನೆ ಹೊರಿಸಲಾದ 21 ಮಂದಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಪರಿಶೀಲನಾ ಅರ್ಜಿಯು ಅಕ್ಟೋಬರ್ ಆದೇಶವನ್ನು ಪ್ರಶ್ನಿಸಲು ಐದು ಆಧಾರಗಳನ್ನು ಎತ್ತಿದೆ. ಬಹುಮುಖ್ಯವಾಗಿ ತೀರ್ಪು ಪೊಲೀಸರಿಗೆ ಅಪಾರ ಅಧಿಕಾರ ನೀಡಲಿದ್ದು, ಅದರ ದುರುಪಯೋಗಕ್ಕೆ ಆಸ್ಪದವಾಗುತ್ತದೆ ಎನ್ನಲಾಗಿತ್ತು.

ನ್ಯಾಯಸಮ್ಮತವಾದ ಪ್ರತಿಭಟನೆಯ ಮೇಲೆ ವಿಶೇಷವಾಗಿ ಕೆಳಸ್ತರದಿಂದ ಬಂದ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಲು ನ್ಯಾಯಾಲಯದ ಅವಲೋಕನಗಳು ಪೊಲೀಸರಿಗೆ ಅವಕಾಶ ನೀಡಬಹುದು. ನ್ಯಾಯಾಲಯದ ತೀರ್ಪಿನಿಂದಾಗಿ ಆಡಳಿತ ವ್ಯವಸ್ಥೆ ಎಂದಿಗೂ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸದಂತಾಗುತ್ತದೆ. ಬದಲಿಗೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ವಾದಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com