ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳನ್ನು ತಾಳೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ [ಅರುಣ್ ಕುಮಾರ್ ಅಗರ್ವಾಲ್ ವಿರುದ್ಧ ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].
ಏಪ್ರಿಲ್ 26ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತಹ ಯಾವುದೇ ಪ್ರಕರಣ ಮಾಡಲಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಏಪ್ರಿಲ್ 26ರ ತೀರ್ಪಿನಲ್ಲಿ ತಪ್ಪುಗಳು ಮತ್ತು ದೋಷಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಅರ್ಜಿದಾರರಾದ ಅರುಣ್ ಕುಮಾರ್ ಅಗರ್‌ವಾಲ್ ಅವರು ಪ್ರತಿಪಾದಿಸಿದ್ದರು.
"ವಿವಿಪಿಎಟಿ ಸ್ಲಿಪ್‌ಗಳೊಂದಿಗೆ ಇವಿಎಂ ಮತಗಳನ್ನು ಎಣಿಸಿದರೆ ಫಲಿತಾಂಶ ಅಸಮಂಜಸ ರೀತಿಯಲ್ಲಿ ವಿಳಂಬವಾಗುತ್ತದೆ ಅಥವಾ ಅಗತ್ಯವಿರುವ ಮಾನವಶಕ್ತಿಯು ಈಗಾಗಲೇ ನಿಯೋಜಿಸುವುದಕ್ಕಿಂತಲೂ ದುಪ್ಪಟ್ಟು ಆಗುತ್ತದೆ ಎಂದು ಹೇಳುವುದು ಸರಿಯಲ್ಲ... ಮತ ಎಣಿಕೆ ಹಾಲ್‌ಗಳಲ್ಲಿ ಅಸ್ತಿತ್ವದಲ್ಲಿರುವ ಸಿಸಿಟಿವಿ ಕಣ್ಗಾವಲು ವಿವಿಪ್ಯಾಟ್ ಚೀಟಿ ಎಣಿಕೆಯಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳುತ್ತದೆ,’’ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿತ್ತು.
ಏಪ್ರಿಲ್ 26 ರಂದು ಅರ್ಜಿ ತಿರಸ್ಕರಿಸಿದ್ದ ಇದೇ ಪೀಠ ಇವಿಎಂ ಬದಲು ಮತಪತ್ರ ಆಧಾರಿತ ಚುನಾವಣಾ ವ್ಯವಸ್ಥೆಗೆ ಮರಳುವಂತೆ ನೀಡಿದ್ದ ಸಲಹೆಯನ್ನೂ ಬದಿಗೆ ಸರಿಸಿತ್ತು.
ಅರ್ಜಿ ವಜಾಗೊಳಿಸುವಾಗ ನ್ಯಾಯಾಲಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಂಬಿಕೆ ಮತ್ತು ಸಹಭಾಗಿತ್ವದ ಸಂಸ್ಕೃತಿಯನ್ನು ಪೋಷಿಸುವ ಅಗತ್ಯದ ಬಗ್ಗೆ ತಿಳಿಸಿತ್ತು. ಆದಾರೂ ಇವಿಎಂಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಸೂಚಿಸಿತ್ತು.
ಚಿಹ್ನೆ ಲೋಡಿಂಗ್ ಘಟಕಗಳನ್ನು ಮೊಹರು ಮಾಡುವುದು, ಮತಯಂತ್ರಗಳ ಮೆಮೊರಿಯನ್ನು ಅಳಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಸೇರಿದಂತೆ ಇವಿಎಂ ಕುರಿತ ವಿಶ್ವಾಸ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ಅದು ಭಾರತದ ಚುನಾವಣಾ ಆಯೋಗ (ಇಸಿಐ) ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಆದರೆ ಈ ಕ್ರಮಗಳು ಸೂಕ್ತವಾಗಿಲ್ಲ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಅಗರ್‌ವಾಲ್ ತಿಳಿಸಿದ್ದರು.
ಚಿಹ್ನೆ ಭರ್ತಿ ಮಾಡುವ ಘಟಕಗಳ (ಸಿಂಬಲ್ ಲೋಡಿಂಗ್ ಯುನಿಟ್- ಎಸ್ ಎಲ್‌ಯು) ಕುರಿತಾದ ಚರ್ಚೆ ದುರ್ಬಲವಾಗಿದ್ದು ಅದನ್ನು ಲೆಕ್ಕ ಹಾಕುವ ಅಗತ್ಯವಿದೆ ಎಂಬ ಅಂಶವನ್ನು ತೀರ್ಪು ನಿರ್ಲಕ್ಷಿಸಿದೆ. ಅಲ್ಲದೆ ಎಸ್‌ಎಲ್‌ಯುನ ದತ್ತಾಂಶ ಅಗತ್ಯ ಚಿತ್ರಗಳನ್ನು ಹೊರತುಪಡಿಸಿ ಹೆಚ್ಚುವರಿ ಬೈಟ್‌ಗಳನ್ನು ಹೊಂದಿರುವ ಸಾಧ್ಯತೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ಕಡೆಗಣಿಸಿದೆ ಎಂದಿದ್ದರು.
ಶೇಕಡಾ 5ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳು ಚಲಾವಣೆಯಾದ ಮತಗಳೊಂದಿಗೆ ತಾಳೆಯಾಗುತ್ತವೆ ಎಂದು ತಪ್ಪಾಗಿ ತೀರ್ಪು ನೀಡಲಾಗಿದೆ. ಆದರೆ ವಾಸ್ತವಿಕವಾಗಿ ಕೇವಲ 1.97 ಶೇಕಡಾ ವಿವಿಪ್ಯಾಟ್ ಸ್ಲಿಪ್‌ಗಳು ಇವಿಎಂ ಮತಗಳೊಂದಿಗೆ ತಾಳೆಯಾಗುತ್ತಿವೆ ಎಂಬುದು ಅವರ ವಾದವಾಗಿತ್ತು.