ಅದಾನಿ ಎಲೆಕ್ಟ್ರಿಸಿಟಿಗೆ ಪ್ರಸರಣ ಗುತ್ತಿಗೆ ಪ್ರಶ್ನಿಸಿದ್ದ ಟಾಟಾ ಪವರ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸುಂಕ ನಿರ್ಧರಿಸುವ ಪ್ರಬಲ ವಿಧಾನವನ್ನು ವಿದ್ಯುಚ್ಛಕ್ತಿ ಕಾಯಿದೆಯ ನಿಯಮಾವಳಿ ಒದಗಿಸುವುದಿಲ್ಲ ಮತ್ತು ನಾಮನಿರ್ದೇಶನಕ್ಕಿಂತ ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court

ಅದಾನಿ ಎಲೆಕ್ಟ್ರಿಸಿಟಿಗೆ ನಾಮನಿರ್ದೇಶನದ ಆಧಾರದ ಮೇಲೆ ₹ 7,000 ಕೋಟಿ ವಿದ್ಯುತ್‌ ಪ್ರಸರಣ ಗುತ್ತಿಗೆ ನೀಡುವ ಮಹಾರಾಷ್ಟ್ರ ವಿದ್ಯುತ್ ನಿಯಂತ್ರಣ ಆಯೋಗದ (MERC) ನಿರ್ಧಾರ ಪ್ರಶ್ನಿಸಿ ಟಾಟಾ ಪವರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ  [ಟಾಟಾ ಪವರ್‌ ಲಿಮಿಟೆಡ್‌ ಟ್ರಾನ್ಸ್‌ಮಿಷನ್‌ ಮತ್ತು ಎಂಇಆರ್‌ಸಿ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ಮೇಲ್ಮನವಿ ನ್ಯಾಯಮಂಡಳಿ (ಎಪಿಟಿಇಎಲ್) ನೀಡಿದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಕಾಯಿದೆಯ ಸೆಕ್ಷನ್ 63ರ ಅಡಿಯಲ್ಲಿ ಹೇಳಿದಂತೆ ಸ್ಪರ್ಧಾತ್ಮಕ ಬಿಡ್ಡಿಂಗ್‌ನಿಂದ ನಿರ್ಗಮಿಸಿದವರಿಗೆ ವಿದ್ಯುತ್ ಕಾಯಿದೆಯ ಸೆಕ್ಷನ್ 62ರ ಅಡಿಯಲ್ಲಿ ನಾಮನಿರ್ದೇಶನದ ಆಧಾರದ ಮೇಲೆ ದೊಡ್ಡ ಮೂಲಸೌಕರ್ಯ ಯೋಜನೆ  ನೀಡಬಹುದೇ ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು.

ಈ ಕಾಯಿದೆಯು ರಾಜ್ಯಗಳ ಒಳಗಿನ ಪ್ರಸರಣ ವ್ಯವಸ್ಥೆಗಳನ್ನು ನಿಯಂತ್ರಿಸಲು ಸಾಕಷ್ಟು ಅನುಕೂಲತೆಯನ್ನು ಒದಗಿಸುತ್ತದೆ ಎಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ , ಇದರಲ್ಲಿ ಸೂಕ್ತ ರಾಜ್ಯ ಆಯೋಗಗಳು ಸುಂಕ ನಿರ್ಧರಿಸುವ ಮತ್ತು ನಿಯಂತ್ರಿಸುವ ಅಧಿಕಾರ ಪಡೆದಿವೆ ಎಂದು ತಿಳಿಸಿತು.

ವಿದ್ಯುಚ್ಛಕ್ತಿ ಕಾಯಿದೆಯು ದರ ನಿರ್ಧರಣಕ್ಕಾಗಿ ಒಂದೇ ಪ್ರಬಲ ವಿಧಾನವನ್ನು ಅನುಸರಿಸುವುದಿಲ್ಲ. ಅಲ್ಲದೆ, ಸ್ಪರ್ಧಾತ್ಮಕ ಬಿಡ್ಡಿಂಗ್‌ ಎಂದಾಕ್ಷಣ ಅದು ನಾಮನಿರ್ದೇಶನವನ್ನು ಮೀರಿದ ಆದ್ಯತೆಯನ್ನು ಪಡೆಯುತ್ತದೆ ಎಂದು ಭಾವಿಸುವಂತಿಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.

Also Read
ಹರಾಜು ಅನರ್ಹತೆ: ₹ 5 ಲಕ್ಷ ದಂಡ ವಿಧಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪು ಸುಪ್ರೀಂನಲ್ಲಿ ಪ್ರಶ್ನಿಸಿದ ಅದಾನಿ ಪೋರ್ಟ್ಸ್

ಆದ್ದರಿಂದ, ಮೇಲ್ಮನವಿಗೆ ಸಂಬಂಧಿಸಿದಂತೆ ಅಧಿಕಾರ ಚಲಾಯಿಸುವಾಗ, ದರವನ್ನು ನಿರ್ಧರಿಸಲು ಸ್ವತಂತ್ರ ಸಂಸ್ಥೆಯಾಗಿರುವ ಎಂಇಆರ್‌ಸಿಯ ಸ್ಥಿರ ಸಂಶೋಧನೆಗಳಲ್ಲಿ ತಾನು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ  ಅಭಿಪ್ರಾಯಪಟ್ಟಿತು.

ಹಾಗಾಗಿ, ರಾಷ್ಟ್ರೀಯ ನೀತಿಗೆ ಅನುಗುಣವಾಗಿ ವಿದ್ಯುತ್ ಕಾಯಿದೆಯ ಸೆಕ್ಷನ್ 181ರ ಅಡಿ ಸುಂಕ ನಿರ್ಧರಿಸಲು ಮಾರ್ಗಸೂಚಿ ರೂಪಿಸುವಂತೆ ಎಲ್ಲಾ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌ ಮೇಲ್ಮನವಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com