'ವಿಚ್ಛೇದಿತ ಮುಸ್ಲಿಂ ಮಹಿಳೆ ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಜೀವನಾಂಶ ಕೋರಬಹುದೇ?' ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್

ಮಾಜಿ ಪತ್ನಿಗೆ ಮಧ್ಯಂತರ ಜೀವನಾಂಶ ಪಾವತಿಸಲು ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದ ಪ್ರಕರಣದಲ್ಲಿ ಹಿರಿಯ ವಕೀಲ ಗೌರವ್ ಅಗರ್‌ವಾಲ್‌ ಅವರನ್ನು ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯ ನೇಮಿಸಿದೆ.
ಮುಸ್ಲಿಂ ಮಹಿಳೆ (ಪ್ರತಿನಿಧಿ ಚಿತ್ರ)
ಮುಸ್ಲಿಂ ಮಹಿಳೆ (ಪ್ರತಿನಿಧಿ ಚಿತ್ರ)

ವಿಚ್ಛೇದಿತ ಮುಸ್ಲಿಂ ಮಹಿಳೆ ಸಿಆರ್‌ಪಿಸಿ ಸೆಕ್ಷನ್‌ 25ರ ಅಡಿಯಲ್ಲಿ ಜೀವನಾಂಶ ಕೋರಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್‌ ಶೀಘ್ರದಲ್ಲೇ ಪರಿಶೀಲಿಸಲಿದೆ.

ಮಾಜಿ ಪತ್ನಿಗೆ ರೂ 10,000 ಮಧ್ಯಂತರ ಜೀವನಾಂಶ ಪಾವತಿಸಲು ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದ ಪ್ರಕರಣದಲ್ಲಿ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ ನೇಮಿಸಿದೆ. ಪ್ರಕರಣದ ವಿಚಾರಣೆ ಫೆಬ್ರವರಿ 19ರಂದು ನಡೆಯಲಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್

ಸಿಆರ್‌ಪಿಸಿ ಸೆಕ್ಷನ್ 125 ಮುಸ್ಲಿಂ ಮಹಿಳೆಯರಿಗೂ ಅನ್ವಯವಾಗುವ ಜಾತ್ಯತೀತ ನಿಬಂಧನೆಯಾಗಿದೆ ಎಂದು ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.

ಆದರೆ, ಈ ತೀರ್ಪನ್ನು 1986ರಲ್ಲಿ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಜಾರಿಗೆ ತರುವ ಮೂಲಕ ಪರಿಣಾಮ ಶೂನ್ಯವಾಗಿಸಲಾಯಿತು. ಕಾಯಿದೆಯನ್ನು ಪ್ರಶ್ನಿಸಲಾಯಿತಾದರೂ ಅದರ ಸಿಂಧುತ್ವವನ್ನು 2001ರಲ್ಲಿ ಎತ್ತಿಹಿಡಿಯಲಾಯಿತು.

ವಿಚ್ಛೇದನ ಪಡೆಯುವ ಮೊದಲು ಅರ್ಜಿದಾರರ ಪತ್ನಿಯಾಗಿದ್ದ ಮುಸ್ಲಿಂ ಮಹಿಳೆ ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶ ಕೋರಿದ್ದರು. ಅವರ ಕೋರಿಕೆಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು, ಅದನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಪತಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ತಿಂಗಳಿಗೆ ರೂ 20,000 ಮಧ್ಯಂತರ ಜೀವನಾಂಶ ಪಾವತಿಸುವಂತೆ ಅರ್ಜಿದಾರರಿಗೆ ಕೌಟುಂಬಿಕ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ ಎಂಬ ಆಧಾರದ ಮೇಲೆ 2017ರಲ್ಲಿ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಹೈಕೋರ್ಟ್ ಜೀವನಾಂಶವನ್ನು ತಿಂಗಳಿಗೆ ₹ 10,000ಕ್ಕೆ ಇಳಿಸಿತು. ಜೊತೆಗೆ ಆರು ತಿಂಗಳೊಳಗೆ ಪ್ರಕರಣ ವಿಲೇವಾರಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.

ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ- 1986ರ ದೃಷ್ಟಿಯಿಂದ, ವಿಚ್ಛೇದಿತ ಮುಸ್ಲಿಂ ಮಹಿಳೆ ಸೆಕ್ಷನ್ 125 ಸಿಆರ್‌ಪಿಸಿ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಲ್ಲ ಎಂದು ಮಾಜಿ ಪತಿಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೆ, 1986ರ ಕಾಯಿದೆ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ವಾದಿಸಲಾಯಿತು.

ಹಿರಿಯ ವಕೀಲ ಎಸ್.ವಾಸಿಂ ಎ.ಖಾದ್ರಿ , ವಕೀಲರಾದ ಸಯೀದ್ ಖಾದ್ರಿ, ಸಾಹಿಲ್ ಗುಪ್ತಾ, ದೀಪಕ್ ಭಾಟಿ, ಶಿವೇಂದ್ರ ಸಿಂಗ್ ಮತ್ತು ಉದಿತಾ ಸಿಂಗ್ ಅವರು ಮಾಜಿ ಪತಿಯ ಪರವಾಗಿ ವಾದಿಸಿದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Mohd Abdul Samad vs State of Telangana and anr.pdf
Preview

Related Stories

No stories found.
Kannada Bar & Bench
kannada.barandbench.com