ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ನಡೆದ ಸಂವಿಧಾನ ದಿನಾಚರಣೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಎರಡು ಹೊಸ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಕೈದಿಗಳ ಬಿಡುಗಡೆಗಾಗಿ ನ್ಯಾಯಾಂಗ ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ತಿಳಿಸುವುದಕ್ಕಾಗಿ ಪೋರ್ಟಲ್ ಪ್ರಾರಂಭಿಸಲಾಗುತ್ತಿದೆ ಎಂದು ಸಿಜೆಐ ಚಂದ್ರಚೂಡ್ ಸಭೆಗೆ ಮಾಹಿತಿ ನೀಡಿದರು.
"ಜೈಲಿನಲ್ಲಿ ಬದುಕು ಸವೆಸುತ್ತಿರುವ ಕೈದಿಗಳ ಬಿಡುಗಡೆ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡುತ್ತಿರುವೆ. ವ್ಯಕ್ತಿಯನ್ನು ಬಿಡುಗಡೆ ಮಾಡಿ ನ್ಯಾಯಾಂಗ ಹೊರಡಿಸಿದ ಆದೇಶಗಳನ್ನು ತಕ್ಷಣ ಪಾಲಿಸುವುದಕ್ಕಾಗಿ ಜೈಲುಗಳು, ವಿಚಾರಣಾ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ಗಳಿಗೆ ಆ ವ್ಯಕ್ತಿಯ ಬಿಡುಗಡೆ ಮಾಹಿತಿ ವರ್ಗಾಯಿಸುವ ಪೋರ್ಟಲ್ ಆರಂಭಿಸುತ್ತಿದ್ದೇವೆ" ಎಂದು ಅವರು ತಮ್ಮ ಭಾಷಣದಲ್ಲಿ ವಿವರಿಸಿದರು.
ಫಾಸ್ಟರ್ 2.0 (FASTER 2.0) ಹೆಸರಿನ ಪೋರ್ಟಲ್ ಈಗ ನೇರಪ್ರಸಾರವಾಗುತ್ತಿದ್ದು ಕೈದಿಗಳನ್ನು ಬಿಡುಗಡೆ ಮಾಡಲು ನ್ಯಾಯಾಂಗ ಆದೇಶಗಳನ್ನು ತಕ್ಷಣ ತಿಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಇದು ಅವಕಾಶ ಮಾಡಿಕೊಡುತ್ತದೆ.
ಸಂವಿಧಾನ ದಿನಾಚರಣೆಯ ಅಂಗವಾಗಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪಡೆಯಬಹುದಾದ ಇ-ಎಸ್‌ಸಿಆರ್ ಪೋರ್ಟಲ್‌ನ ಹಿಂದಿ ಆವೃತ್ತಿಗೆ ಕೂಡ ಇಂದು ಚಾಲನೆ ನೀಡಲಾಯಿತು.
"ಇಂದು, ನಾವು ಹಿಂದಿಯಲ್ಲಿ ಇ-ಎಸ್‌ಸಿಆರ್ ಪೋರ್ಟಲ್ ಪ್ರಾರಂಭಿಸುತ್ತಿದ್ದು 21,388 ತೀರ್ಪುಗಳನ್ನು ಹಿಂದಿಗೆ ಅನುವಾದಿಸಿ ಪರಿಶೀಲಿಸಲಾಗಿದೆ ... ಉಳಿದ ಎಲ್ಲಾ ಅನುವಾದಿತ ತೀರ್ಪುಗಳನ್ನು ಪರಿಶೀಲಿಸಲಾಗುತ್ತಿದೆ. 9,276 ತೀರ್ಪುಗಳನ್ನು ಪಂಜಾಬಿ, ಒಡಿಯಾ, ಬಂಗಾಳಿ, ಉರ್ದು, ಗಾರೊ, ಅಸ್ಸಾಮಿ, ಕೊಂಕಣಿ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಿಸಲಾಗಿದ್ದು ಎಲ್ಲವನ್ನೂ ಇ ಎಸ್‌ಸಿಆರ್ ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದೆ. ತಂತ್ರಜ್ಞಾನವು ನಮ್ಮನ್ನು ನಮ್ಮ ಜನರಿಂದ ದೂರವಿರಿಸದೆ ಹತ್ತಿರ ತರುತ್ತದೆ " ಎಂದು ಸಿಜೆಐ ಅವರು ಯೋಜನೆಗೆ ಚಾಲನೆ ನೀಡುವ ಮುನ್ನ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ವರ್ಚುವಲ್ ನ್ಯಾಯ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಇದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಅಂಕಿಅಂಶಗಳನ್ನು ಒಳಗೊಂಡಿದೆ.
ನ್ಯಾಯಾಲಯಗಳ ಮೆಟ್ಟಿಲೇರುವುದನ್ನು ಜನರು ನ್ಯಾಯಯುತ ಕಾರ್ಯವಿಧಾನವಾಗಿ ನೋಡಬೇಕೆ ಹೊರತು ಕೊನೆಯ ಉಪಾಯವಾಗಿಯಲ್ಲ ಎಂದು ಆಶಿಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ 75 ನೇ ಸಂವಿಧಾನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವೈವಿಧ್ಯಮಯ ಪ್ರಕರಣಗಳ ಕುರಿತು ಪ್ರಸ್ತಾಪಿಸುತ್ತಾ ಶುದ್ಧ ಗಾಳಿ, ನೀರಿನಂತಹ ಅಗತ್ಯಗಳಿಗಾಗಿಯೂ ಜನ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ ಎಂದರು.
ಯಾವುದೇ ಪ್ರಜೆ ಮುಖ್ಯ ನ್ಯಾಯಮೂರ್ತಿಗಳಿಗೆ ಸರಳವಾದ ಪತ್ರವೊಂದನ್ನು ಬರೆದು ಸಾಂವಿಧಾನಿಕ ಯಂತ್ರಕ್ಕೆ ಚಾಲನೆ ನೀಡಬಹುದಾಗಿದೆ. ಈ ಬಗೆಯ ರೂಢಿ ಪೋಸ್ಟ್‌ಕಾರ್ಡ್ ಯುಗದಿಂದ ಆಧುನಿಕವಾದ ಇಮೇಲ್‌ವರೆಗೂ ವಿಕಸನಗೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ಜೊತೆಗೆ ಪ್ರತ್ಯೇಕ ಸಂವಿಧಾನದ ದಿನದ ಅಗತ್ಯತೆಯ ಬಗ್ಗೆ ಮಾತನಾಡಿದ ಅವರು, ಸಂವಿಧಾನ ಕೇವಲ ಕಾನೂನು ದಾಖಲೆಯಲ್ಲ ಬದಲಿಗೆ ಭಾರತೀಯ ಸಾಮಾಜಿಕ ಜೀವನದಲ್ಲಿ ಬೇರೂರಿರುವ ಸಂಕೇತವಾಗಿದೆ ಎಂದು ಪ್ರತಿಪಾದಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಕೇಂದ್ರ ಕಾನೂನು ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಮತ್ತು ಎಸ್‌ಸಿಬಿಎ ಅಧ್ಯಕ್ಷ ಡಾ.ಆದಿಶ್ ಸಿ ಅಗರ್‌ವಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.