ಪ್ರತಿ ಮತಗಟ್ಟೆಯ ಮತದಾರರ ಸಂಖ್ಯೆ ಹೆಚ್ಚಳ ಪ್ರಶ್ನಿಸಿದ್ದ ಮನವಿ: ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಇಸಿಐಗೆ ಈ ಸಂಬಂಧ ನ್ಯಾಯಾಲಯ ಔಪಚಾರಿಕ ನೋಟಿಸ್ ನೀಡಲಿಲ್ಲವಾದರೂ ಕಿರು ಅಫಿಡವಿಟ್ ಸಲ್ಲಿಸುವ ಇಸಿಐನ ನಿಲುವನ್ನು ದಾಖಲಿಸಿಕೊಂಡಿತು.
Finger with indelible ink mark (right to vote) and Supreme Court
Finger with indelible ink mark (right to vote) and Supreme Court
Published on

ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು 1,500 ಅಥವಾ ಅದಕ್ಕಿಂತಲೂ ಹೆಚ್ಚು ಮಾಡುವ ಕುರಿತು ತನ್ನ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ತಿಳಿಸಿದೆ [ಇಂದು ಪ್ರಕಾಶ್ ಸಿಂಗ್ ಮತ್ತು ಭಾರತೀಯ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ಸಿಜೆಐ ಸಂಜೀವ್‌ ಖನ್ನಾ ಹಾಗೂ ನ್ಯಾಯಮೂರ್ತಿ ಪಿ ವಿ ಸಂಜಯ್‌ ಕುಮಾರ್‌ ಅವರಿದ್ದ ಪೀಠ ಇಸಿಐಗೆ ಔಪಚಾರಿಕ ನೋಟಿಸ್‌ ನೀಡಲಿಲ್ಲವಾದರೂ ಕಿರು ಅಫಿಡವಿಟ್‌ ಸಲ್ಲಿಸುವುದಾಗಿ ತಿಳಿಸಿದ ಇಸಿಐನ ನಿಲುವನ್ನು ದಾಖಲಿಸಿಕೊಂಡಿತು.

Also Read
ಅಭ್ಯರ್ಥಿಗಳ ಅವಿರೋಧ ಆಯ್ಕೆ ಪ್ರಶ್ನಿಸಿ ಅರ್ಜಿ: ಕೇಂದ್ರ, ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಇಸಿಐ ಪರವಾಗಿ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್, 2019ರಲ್ಲೇ ಮತದಾರರ ಸಂಖ್ಯೆಯನ್ನು 1,500ಕ್ಕೆ ಹೆಚ್ಚಳ ಮಾಡಿದ್ದರೂ ಇಲ್ಲಿಯವರೆಗೆ ಯಾವುದೇ ದೂರು ನೀಡಿಲ್ಲ ಎಂದು ಆಕ್ಷೇಪಿಸಿದರು. ಔಪಚಾರಿಕವಾಗಿ ನೋಟಿಸ್ ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲ ರಾಜಕೀಯ ಪಕ್ಷಗಳ ಸಮಾಲೋಚನೆ ನಡೆಸಲಾಗಿದೆ ಎಂದೂ ಅವರು ತಿಳಿಸಿದರು. ನ್ಯಾಯಾಲಯವು ಅಂತಿಮವಾಗಿ ಔಪಚಾರಿಕ ನೋಟಿಸ್‌ ನೀಡಲಿಲ್ಲ. ಆದರೆ  3 ವಾರಗಳಲ್ಲಿ ಕಿರು ಅಫಿಡವಿಟ್‌ ಮೂಲಕ ತನ್ನ ನಿಲುವು ತಿಳಿಸುವಂತೆ ಇಸಿಐಗೆ ಅದು ಸೂಚಿಸಿತು. ಜನವರಿ 27, 2025 ರಿಂದ ಪ್ರಾರಂಭವಾಗುವ ವಾರದಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Also Read
ಪ್ರತಿ ಬೂತ್‌ನಲ್ಲಿ ಚಲಾವಣೆಯಾದ ಒಟ್ಟು ಮತ ಮಾಹಿತಿ ಪ್ರಕಟಿಸಲು ಇಸಿಐಗೆ ನಿರ್ದೇಶಿಸಲು ಸುಪ್ರೀಂ ನಕಾರ

ಈ ಹಿಂದೆ ಅಂದರೆ 1957ರಿಂದ 2016ರವರೆಗೆ ಇದ್ದಂತೆ ಪ್ರತಿ ಮತಗಟ್ಟೆಯ ಮತದಾರರ ಸಂಖ್ಯೆಯನ್ನು 1,200ರಷ್ಟೇ ಉಳಿಸಿಕೊಳ್ಳಬೇಕು. ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 25ರ ಅಡಿಯಲ್ಲಿ ತಿಳಿಸಿರುವಂತೆ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಮನವಿ ಮಾಡಿದ್ದರು.

ಅಲ್ಲದೆ, ಮತದಾನ ಕೇಂದ್ರಗಳನ್ನು ನಗರ ಮತ್ತು ಗ್ರಾಮೀಣ ವರ್ಗೀಕರಣಕ್ಕೆ ಒಳಪಟ್ಟು ಪ್ರತಿ ಮತಗಟ್ಟೆಗೆ ಗರಿಷ್ಠ 1,000-1,200 ಮತದಾರರ ಅನುಪಾತವನ್ನೇ ಉಳಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು. ಜೊತೆಗೆ ಭವಿಷ್ಯದಲ್ಲಿ ಆ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಹೋಗಬೇಕು ಎಂದು ಪ್ರಾರ್ಥಿಸಲಾಗಿತ್ತು.  

Kannada Bar & Bench
kannada.barandbench.com