ಸಾಯಿಬಾಬಾ, ಸ್ಟ್ಯಾನ್‌ಸ್ವಾಮಿ ಸಾವು ಉಲ್ಲೇಖಿಸಿ ವಿಕಲಚೇತನ ಕೈದಿಗಳಿಗೆ ಸೌಲಭ್ಯ ಕೋರಿಕೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿ ಸೆರೆವಾಸದಲ್ಲಿದ್ದಾಗ ಸಾವನ್ನಪ್ಪಿದರೆ ಚಿಂತಕ ಪ್ರೊ. ಸಾಯಿಬಾಬಾ ಅವರು ಖುಲಾಸೆಗೊಂಡ ಕೆಲವೇ ವಾರಗಳಲ್ಲಿ ಮೃತಪಟ್ಟಿದ್ದರು. ಇಬ್ಬರೂ ವಿಕಲಚೇತನರಾಗಿದ್ದರು.
Persons with disabilities
Persons with disabilities
Published on

ಜೈಲುಗಳಲ್ಲಿರುವ ವಿಕಲಚೇತನ ಕೈದಿಗಳಿಗೆ ಸಾಕಷ್ಟು ಸೌಲಭ್ಯ ಒದಗಿಸಬೇಕು ಮತ್ತು ದೇಶದೆಲ್ಲೆಡೆಯ ಜೈಲುಗಳಲ್ಲಿ 2016ರ ವಿಕಲಚೇತನರ ಹಕ್ಕುಗಳ ಕಾಯಿದೆಯನ್ನು ಸಂಪೂರ್ಣ ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್‌) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಸತ್ಯನ್ ನರವೂರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ವಿಕಲಚೇತನ ಕೈದಿಗಳನ್ನು ತೀವ್ರ ನಿರ್ಲಕ್ಷ್ಯದಿಂದ ಕಾಣುತ್ತಿರುವುದು ಮತ್ತು ಜೈಲುಗಳಲ್ಲಿ ವಿಕಲಚೇತನ ಸ್ನೇಹಿ ವಸತಿ, ಶೌಚಾಲಯ ಇನ್ನಿತರ ಸೌಲಭ್ಯಗಳ ಕೊರತೆ ಇರುವುದನ್ನು ಎತ್ತಿ ತೋರಿಸುವುದಕ್ಕಾಗಿ ಚಿಂತಕ ಪ್ರೊ. ಜಿ ಎನ್ ಸಾಯಿಬಾಬಾ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಪ್ರಕರಣಗಳನ್ನು ಪಿಐಎಲ್ ಉಲ್ಲೇಖಿಸಿದೆ.  ಸಾಮಾಜಿಕ ಕಾರ್ಯಕರ್ತ ಸತ್ಯನ್ ನರವೂರ್ ಅರ್ಜಿ ಸಲ್ಲಿಸಿದ್ದಾರೆ.

Also Read
ಎಲ್ಲಾ ವಿಕಲಚೇತನ ಅಭ್ಯರ್ಥಿಗಳೂ ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿ ಸೆರೆವಾಸದಲ್ಲಿದ್ದಾಗ 2021ರಲ್ಲಿ ಸಾವನ್ನಪ್ಪಿದರೆ ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ 2014ರಲ್ಲಿ ಬಂಧಿತರಾಗಿದ್ದ ಚಿಂತಕ ಪ್ರೊ. ಸಾಯಿಬಾಬಾ ಅವರು ಖುಲಾಸೆಗೊಂಡ ಕೆಲವೇ ವಾರಗಳಲ್ಲಿ ಮೃತಪಟ್ಟಿದ್ದರು. ಇಬ್ಬರೂ ವಿಕಲಚೇತನರಾಗಿದ್ದರು.

ಅರ್ಜಿದಾರರರ ಪರ ವಕೀಲರಾದ ಕಾಳೀಶ್ವರಂ ರಾಜ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ನಾಲ್ಕು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ವಿಕಲಚೇತನರಾದ ಪ್ರೊ. ಜಿ ಎನ್‌ ಸಾಯಿಬಾಬಾ ಅವರ ನಿಧನಕ್ಕೆ ದೀರ್ಘಕಾಲದ ಸೆರೆವಾಸ ಮತ್ತು ಅವರ ಬಂಧನದ ಅಮಾನವೀಯ ಸ್ಥಿತಿಗಳು ಕಾರಣವಾದರೆ ಪಾರ್ಕಿನ್ಸನ್ ಸಿಂಡ್ರೋಮ್‌ನಿಂದಾಗಿ ಸ್ಟಾನ್ ಸ್ವಾಮಿ ಕೂಡ ಅಂಗವೈಕಲ್ಯದಿಂದ ಬಳಲುತ್ತಿದ್ದರು. ಅವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮೂಲಭೂತ ಸೌಲಭ್ಯ ನಿರಾಕರಿಸಲಾಗಿತ್ತು.

  • ಹೀಗಾಗಿ ವಿಕಲಚೇತನ ಕೈದಿಗಳ ವಿಶೇಷ ಅಗತ್ಯಗಳನ್ನು ಈಡೇರಿಸುವುದಕ್ಕಾಗಿ ಅಸ್ತಿತ್ವದಲ್ಲಿರುವ ಜೈಲು ಕಾಯಿದೆ ಮತ್ತು ನಿಯಮಾವಳಿಗೆ ಅಗತ್ಯ ನಿಬಂಧನೆ ಸೇರಿಸಬೇಕು.

  • ವಿಕಲಚೇತನರ ಕಾಯಿದೆ ಜಾರಿಗೆ ಬಂದು ಎಂಟಕ್ಕೂ ಹೆಚ್ಚು ವರ್ಷ ಕಳೆದರೂ ವಿಕಲಚೇತನ ಕೈದಿಗಳಿಗೆ ಒದಗಿಸಬೇಕಾದ ವಿವಿಧ ಸೌಲಭ್ಯಗಳ ಕುರಿತು ಕಡ್ಡಾಯ ನಿಬಂಧನೆಗಳು ಅಸ್ತಿತ್ವದಲ್ಲಿಲ್ಲ.

  • ವಿಕಲಚೇತನ ಕೈದಿಗಳು ಸುಲಭವಾಗಿ ಜೈಲಿನಲ್ಲಿ ಸಂಚರಿಸುವ ಮತ್ತು ಮಾನವೀಯ ಚಿಕಿತ್ಸೆ  ಪಡೆಯುವ ಸಮಗ್ರ ಕಾನೂನುಗಳು ಅಮೆರಿಕ ಮತ್ತು ಇಂಗ್ಲೆಂಡ್ ರೀತಿಯ ದೇಶಗಳಲ್ಲಿ ಅಸ್ತಿತ್ವದಲ್ಲಿವೆ.

  • ವಿಶ್ವಸಂಸ್ಥೆಯ ವಿಕಲಚೇತನರ ಹಕ್ಕುಗಳ ಸಮಾವೇಶ (ಯುಎನ್‌ಸಿಆರ್‌ಪಿಡಿ) ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಉಳಿದ ಸೆರವಾಸಿಗಳಂತೆ ಸಮಾನ ರೀತಿಯಲ್ಲಿ ಜೈಲು ಸೌಲಭ್ಯ  ಪಡೆಯುವುದನ್ನು ಕಡ್ಡಾಯಗೊಳಿಸುವ ನೆಲ್ಸನ್ ಮಂಡೇಲಾ ನಿಯಮಾವಳಿ ಅಡಿಯಲ್ಲಿ ಭಾರತ ಬದ್ಧತೆ ತೋರಬೇಕಿದೆ.

  • ಜಾಗತಿಕ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ  ಜೈಲು ವ್ಯವಸ್ಥೆ ರೂಪಿಸಲು ಭಾರತದಲ್ಲಿಯೂ ಇದೇ ರೀತಿಯ ಶಾಸಕಾಂಗ ಮತ್ತು ಆಡಳಿತಾತ್ಮಕ ಸುಧಾರಣೆಗಳ ಅಗತ್ಯವಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
sathyan_Naravoor_vs_UOI___Ors_
Preview
Kannada Bar & Bench
kannada.barandbench.com