ಕೇಂದ್ರದ ನಿಧಾನಗತಿಯ ಪ್ರತಿಕ್ರಿಯೆಯಿಂದ ದಣಿದಿದ್ದೇವೆ: ಸುಪ್ರೀಂ ಕೋರ್ಟ್ ಅತೃಪ್ತಿ

"ನಾವು ಬೌದ್ಧಿಕ ಬಳಲಿಕೆಯ ಹಂತದಲ್ಲಿದ್ದೇವೆ" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
Supreme Court
Supreme Court
Published on

ವಿಕಲಚೇತನರ ಹಕ್ಕುಗಳ ಕಾಯಿದೆ- 2016ನ್ನು ಜಾರಿಗೆ ತರುವ ಕುರಿತ ಸ್ಥಿತಿಗತಿ ವರದಿಗಳನ್ನು ಸಲ್ಲಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಸೋಮವಾರ  ಹತಾಶೆ ವ್ಯಕ್ತಪಡಿಸಿದೆ [ ಸೀಮಾ ಗಿರಿಜಾ ಲಾಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕಾಯಿದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮನವಿಯನ್ನು ಆಲಿಸಲು ಉದ್ದೇಶಿಸಿದ್ದ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಕೇಂದ್ರ ಇನ್ನೂ ಸ್ಥಿತಿಗತಿ ವರದಿಯನ್ನು ಸಲ್ಲಿಸಿಲ್ಲ ಎಂಬುದನ್ನು ಗಮನಿಸಿತು.

Also Read
[ಲಖಿಂಪುರ್ ಖೇರಿ ಪ್ರಕರಣ] ಮಂದಗತಿ ತನಿಖೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತಪರಾಕಿ

ಸೆಪ್ಟೆಂಬರ್ 30 ರಂದು ನಡೆದ ವಿಚಾರಣೆ ವೇಳೆ  ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರು ವರದಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಕೋರಿದರು.

“ನೀವು ಹಾಜರಾದಾಗಲೆಲ್ಲಾ ಹೆಚ್ಚಿನ ಸಮಯಾವಕಾಶ ಕೋರುತ್ತೀರಿ ಎನ್ನುವ ಭಾವನೆ ಇದೆ. ನಾವು ಬೌದ್ಧಿಕ ಬಳಲಿಕೆಯ ಹಂತದಲ್ಲಿದ್ದೇವೆ. ನೀವು ಸ್ಥಿತಿಗತಿ ವರದಿ ಸಲ್ಲಿಸುವುದು ಯಾವಾಗ?” ಎಂದು ನ್ಯಾಯಾಲಯ ಪ್ರಶ್ನಿಸಿತು.

ದಸರಾ ವಿರಾಮದ ನಂತರ ಕೇಂದ್ರ ವಿಕಲಚೇತನರ ಸಬಲೀಕರಣ ಇಲಾಖೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಕಡೆಗೆ ತಿಳಿಸಿತು.

" 22 ಏಪ್ರಿಲ್ 2024 ರ ಆದೇಶದ ಹೊರತಾಗಿಯೂ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ  ವಿಕಲಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ  ಯಾವುದೇ ಸ್ಥಿತಿಗತಿ ವರದಿ ಸಲ್ಲಿಸಿಲ್ಲ. ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರ ಕೋರಿಕೆಯ ಮೇರೆಗೆ, ವರದಿ ಸಲ್ಲಿಸಲು ಕೊನೆಯ ಮತ್ತು ಅಂತಿಮ ಅವಕಾಶವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿದೆ," ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿತು.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  2016 ರ ಅಂಗವಿಕಲರ ಹಕ್ಕುಗಳ ಕಾಯಿದೆಯ ಅನುಷ್ಠಾನದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಅಕ್ಟೋಬರ್ 14 ರಂದು ಮುಂದಿನ ವಿಚಾರಣೆ ನಡೆಯಲಿದೆ.

Also Read
ನರೇಶ್ ಗೋಯಲ್ ಅಸಹಕಾರದಿಂದಾಗಿ ತನಿಖೆ ನಿಧಾನ: ಬಾಂಬೆ ಹೈಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಅಫಿಡವಿಟ್

ಏಪ್ರಿಲ್ 22ರ ಆದೇಶದಲ್ಲಿ, ಕಾನೂನು ಅಸ್ತಿತ್ವಕ್ಕೆ ಬಂದು ಏಳು ವರ್ಷಗಳು ಕಳೆದಿದ್ದರೂ, ದೇಶಾದ್ಯಂತ ಅದರ ಜಾರಿ ನೀರಸವಾಗಿದೆ. ಸೂಕ್ತ ರೀತಿಯಲ್ಲಿ ಅದು ಜಾರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

 ಈ ನಿಟ್ಟಿನಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂಗವಿಕಲರ ಸಬಲೀಕರಣ ಇಲಾಖೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಅದು ಆದೇಶಿಸಿತ್ತು .

Kannada Bar & Bench
kannada.barandbench.com