ತೀಸ್ತಾ ಅವರನ್ನು ಜು.19ರವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ ವಿಸ್ತರಿಸಿದ ಸುಪ್ರೀಂ ಕೋರ್ಟ್

ಗುಜರಾತ್ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೊಂದಿಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಅವರು ಕೆಲವು ದಾಖಲೆಗಳನ್ನು ಭಾಷಾಂತರಿಸಲು ಸಮಯ ಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
Teesta Setalvad and Supreme Court
Teesta Setalvad and Supreme CourtFacebook

ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಅಂದಿನ ಗುಜರಾತ್‌ ಸರ್ಕಾರವನ್ನು ಅಪನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಅವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಜುಲೈ 19 ರವರೆಗೆ ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಕ್ಷಣೆ ವಿಸ್ತರಿಸಿದೆ [ತೀಸ್ತಾ ಅತುಲ್‌ ಸೆಟಲ್‌ವಾಡ್‌ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರದ ಪ್ರತಿಕ್ರಿಯೆ ಕೇಳಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಹಾಗೂ ದೀಪಂಕರ್ ದತ್ತಾ ಅವರಿದ್ದ ವಿಶೇಷ ಪೀಠ ಜುಲೈ 19 ರಂದು ಅಂತಿಮ ವಿಲೇವಾರಿಗೆ ಪ್ರಕರಣವನ್ನು ಮುಂದೂಡಿತು.

ಗುಜರಾತ್ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೊಂದಿಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಅವರು ಕೆಲವು ದಾಖಲೆಗಳನ್ನು ಭಾಷಾಂತರಿಸಲು ಸಮಯ ಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಸೆಟಲ್‌ವಾಡ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂದು ಕೋರಿದರು.

ಕಳೆದ ಶನಿವಾರ ನಡೆದ ವಿಶೇಷ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ ತೀಸ್ತಾ ಅವರಿಗೆ ಏಳು ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಅದರ ಅವಧಿ ಜುಲೈ 8ರಂದು ಕೊನೆಗೊಳ್ಳುತ್ತಿತ್ತು.

ತೀಸ್ತಾ ಅವರು ಜಾಮೀನಿನ ಮೇಲೆ ಹೊರಗಿದ್ದರೆ ರಾಜ್ಯದಲ್ಲಿ ಕೋಮು ಧ್ರುವೀಕರಣ ಹೆಚ್ಚುತ್ತದೆ ಎಂದಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತೀಸ್ತಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

Related Stories

No stories found.
Kannada Bar & Bench
kannada.barandbench.com