ರೈತರ ಪ್ರತಿಭಟನೆ: ವಿವಾದ ಬಗೆಹರಿಯುವವರೆಗೆ ಕಾನೂನುಗಳನ್ನು ಅಮಾನತಿನಲ್ಲಿ ಇಡಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ದೆಹಲಿಯ ಗಡಿಗಳಲ್ಲಿ ಜಮಾವಣೆಗೊಳ್ಳುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ನಡೆದ ಸುದೀರ್ಘ ವಿಚಾರಣೆಯಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶಗಳ ಮಾಹಿತಿ.
ರೈತರ ಪ್ರತಿಭಟನೆ: ವಿವಾದ ಬಗೆಹರಿಯುವವರೆಗೆ ಕಾನೂನುಗಳನ್ನು ಅಮಾನತಿನಲ್ಲಿ ಇಡಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
Salve-Chidambaram-KKV-Tushar Mehta-AP Singh

ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕೃಷಿಕರ ನಡುವಿನ ಬಿಕ್ಕಟ್ಟು ಪರಿಹರಿಸಲು ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದೆ. ದೆಹಲಿ-ಎನ್‌ಸಿಆರ್‌ ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರನ್ನು ತೆರವುಗೊಳಿಸುವ ಸಂಬಂಧ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆ ನಡೆಸುವುದರ ಜೊತೆಗೆ ಮೇಲಿನ ಜವಾಬ್ದಾರಿಯನ್ನೂ ಸುಪ್ರೀಂ ಕೋರ್ಟ್‌ ತೆಗೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುದೀರ್ಘ ವಿಚಾರಣೆ ನಡೆಸಿದ ಪೀಠವು, ತಕ್ಷಣಕ್ಕೆ ರೈತರನ್ನು ಅಲ್ಲಿಂದ ತೆರವುಗೊಳಿಸುವ ಸಂಬಂಧ ಯಾವುದೇ ತೆರನಾದ ಆದೇಶ ಹೊರಡಿಸುವುದಿಲ್ಲ ಎಂದು ಹೇಳಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುವ ಸಂಬಂಧ ಸಮಿತಿ ರಚಿಸುವ ಪ್ರಯತ್ನ ಮಾಡಲು ನ್ಯಾಯಾಲಯ ಮುಂದಾಗಿದೆ. ವಿಚಾರಣೆಯ ಸಂದರ್ಭದಲ್ಲಿ ವಿವಿಧ ನ್ಯಾಯವಾದಿಗಳು ಮಂಡಿಸಿದ ವಾದ ಇಂತಿದೆ.

ಪ್ರತಿಭಟನಾ ಹಕ್ಕು ಪರಿಪೂರ್ಣವಲ್ಲ: ಉತ್ತರ ಪ್ರದೇಶ ಮತ್ತು ಹರಿಯಾಣ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ

 • ವಾಹನಗಳು ಮತ್ತು ಸರಕು-ಸರಂಜಾಮು ವಾಹನಗಳು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ತಡೆಯುವ ಮೂಲಕ ಪ್ರತಿಭಟನಾ ನಿರತ ರೈತರು ವಾಸ್ತವದಲ್ಲಿ ರಾಷ್ಟ್ರ ರಾಜಧಾನಿಯನ್ನು ದಿಗ್ಬಂಧನದಲ್ಲಿರಿಸಿದ್ದಾರೆ.

 • ಪ್ರತಿಭಟನಾಕಾರರು ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದು, ಗುರುಗಾಂವ್‌ ಮತ್ತು ನೋಯ್ಡಾದಂತಹ ಉಪನಗರಗಳಿಂದ ದಿನನಿತ್ಯ ಪ್ರಯಾಣಿಸುವವರು ನಗರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

 • ಸಂಚಾರ ದಟ್ಟಣೆ ಉಂಟಾದಾಗ, ಸರಕುಗಳು ದುಬಾರಿಯಾಗುತ್ತವೆ. ಜನರಿಗೆ ಪ್ರಯಾಣಿಸಲು ಸಾಧ್ಯವಾಗದಿದ್ದಾಗ ಉದ್ಯೋಗ ನಷ್ಟಕ್ಕೆ ಯಾರು ಕಾರಣರಾಗುತ್ತಾರೆ?

 • ನಗರವೊಂದನ್ನು ಹೀಗೆ ಒತ್ತೆ ಹಿಡಿದಿಡುವುದು ಸಾಧ್ಯವಿಲ್ಲ. ಸರ್ಕಾರ ನಮ್ಮ ಮಾತು ಕೇಳಬೇಕು ಇಲ್ಲವೇ ನಾವು ದೇಶವನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೇಳಲಾಗದು.

 • ಕೋವಿಡ್‌ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ರಸ್ತೆಗಿಳಿಯುವ ಮೂಲಕ ನೀವು (ರೈತರು) ನಮ್ಮ ಬದುಕುವ ಹಕ್ಕಿಗೆ ಹೊಡೆತ ನೀಡುತ್ತಿದ್ದೀರಿ. ಪ್ರತಿಭಟಿಸುವ ಹಕ್ಕಿನ ಮಿತಿಗಳನ್ನು ನೀವು ಗಮನಿಸಬೇಕಿಗದೆ.

 • ಪ್ರತಿಭಟನಾಕಾರರನ್ನು ಸ್ಪಷ್ಟವಾಗಿ ಗುರುತಿಸುವ ಮೂಲಕ ಮುಂದೆ ಸಾರ್ಜನಿಕ ಅಥವಾ ಖಾಸಗಿ ಆಸ್ತಿ-ಪಾಸ್ತಿಗೆ ನಷ್ಟವಾದರೆ ಅವರಿಂದ ನಷ್ಟವನ್ನು ಭರಿಸುವ ಕ್ರಮವಾಗಬೇಕು ಎಂದು ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದಿಸಿದರು.

ಸಮಿತಿಗೆ ಯಾವುದೇ ಆಕ್ಷೇಪವಿಲ್ಲ: ಪಂಜಾಬ್‌ ಪರ ಹಿರಿಯ ವಕೀಲ ಪಿ ಚಿದಂಬರಂ

 • ರೈತರ ಆತಂಕಗಳು ಮತ್ತು ಅವುಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಸೂಚಿಸುವ ಸಂಬಂಧ ಸಮಿತಿ ರಚಿಸುವುದಕ್ಕೆ ಆಕ್ಷೇಪವಿಲ್ಲ. ಸಮಿತಿಯಲ್ಲಿ ಯಾರೆಲ್ಲಾ ಇರಬೇಕು ಎಂಬುದನ್ನು ಕೇಂದ್ರ ಸರ್ಕಾರ ಮತ್ತು ರೈತರು ನಿರ್ಧರಿಸಬೇಕು.

 • ರಾಜಧಾನಿಗೆ ಪ್ರವೇಶಿಸದಂತೆ ರೈತರನ್ನು ತಡೆದವರು ಯಾರು? ದೆಹಲಿ ಪೊಲೀಸರು ಮತ್ತು ಸರ್ಕಾರದ ಅಧಿಕಾರಿಗಳು ರಸ್ತೆಗಳನ್ನು ಬಂದ್‌ ಮಾಡಿ, ರೈತರು ಅವುಗಳನ್ನು ಮುಚ್ಚಿದ್ದಾರೆ ಎಂದು ಹೇಳಲಾಗದು. ರೈತರು ದೆಹಲಿ ಪ್ರವೇಶಿಸಲು ಬಯಸಿದ್ದರೇ ವಿನಾ ಸಂಚಾರ ತಡೆಯುವುದು ಅವರ ಉದ್ದೇಶವಲ್ಲ.

 • ಪ್ರತಿಭಟಿಸುವ ಹಕ್ಕಿನ ಕುರಿತು ಹಿರಿಯ ವಕೀಲ ಸಾಳ್ವೆ ಅವರ ವಾದಕ್ಕೆ ಗಂಭೀರವಾಗಿ ಆಕ್ಷೇಪಿಸುತ್ತೇವೆ ಎಂದ ಪಿ ಚಿದಂಬರಂ.

 • ಸಂಸತ್‌ ಅಧಿವೇಶನ ನಡೆಸುವ ಮೂಲಕ ಚರ್ಚೆ ನಡೆಸಬೇಕು. ಯಾವೆಲ್ಲಾ ರೀತಿಯಲ್ಲಿ ಸಹಾಯ ಮಾಡಬೇಕೋ ಅದಕ್ಕೆ ಪಂಜಾಬ್‌ ಸಹಕರಿಸಲಿದೆ. ಕಾನೂನು ರದ್ದುಪಡಿಸಿ ಎಂದು ರೈತರು ಹೇಳುತ್ತಿಲ್ಲ. ಆದರೆ, ಕಾನೂನು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರವು ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳಬಹುದು, ರದ್ದುಪಡಿಸಬಹುದು ಮತ್ತು ಪುನಾ ಜಾರಿಗೆ ತರಬಹುದು.

ದೆಹಲಿಗೆ ಹೊಡೆತ: ದೆಹಲಿ ಪರ ವಕೀಲ ರಾಹುಲ್‌ ಮೆಹ್ರಾ

 • ಪ್ರತಿಭಟನೆಯಿಂದ ದೆಹಲಿಗೆ ಹೆಚ್ಚು ಸಮಸ್ಯೆಯಾಗುತ್ತಿರುವುದರಿಂದ ತಮ್ಮ ವಾದ ಆಲಿಸಬೇಕು ಎಂದು ದೆಹಲಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲ ರಾಹುಲ್‌ ಮೆಹ್ರಾ ಪೀಠಕ್ಕೆ ಮನವಿ ಮಾಡಿದರು. ಆನಂತರ ಅವರ ವಾದ ಆಲಿಸುವುದಾಗಿ ಪೀಠ ಹೇಳಿತು.

ಭಾರತ ಕೃಷಿ ಪ್ರಧಾನ ರಾಷ್ಟ್ರ: ಭಾರತೀಯ ಕಿಸಾನ್‌ ಒಕ್ಕೂಟದ ಪರ ವಕೀಲ ಎ ಪಿ ಸಿಂಗ್‌

 • ರೈತರನ್ನು ಪ್ರತಿನಿಧಿಸುತ್ತಿರುವ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಪರ ವಕೀಲ ಎ ಪಿ ಸಿಂಗ್‌ “ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಕಾರ್ಪೊರೇಟ್‌ ರಾಷ್ಟ್ರವಲ್ಲ” ಎಂದರು.

 • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಏನಾಯಿತು? ರೈತರು ಎಲ್ಲಿಗೆ ಹೋಗ ಬೇಕು? ರಾಮಲೀಲಾ ಮೈದಾನವನ್ನು ಪ್ರತಿಭಟನಾಕಾರರಿಗೆ ಏಕೆ ನೀಡಬಾರದು ಎಂದು ಪ್ರಶ್ನಿಸಿದರು

ರಸ್ತೆ ತಡೆಯುವುದರಿಂದ ಸಂಚಾರದ ಹಕ್ಕಿನ ಉಲ್ಲಂಘನೆ: ಎಜಿ ವೇಣುಗೋಪಾಲ್‌ ಮತ್ತು ಎಸ್‌ಜಿ ತುಷಾರ್‌ ಮೆಹ್ತಾ

 • ರಸ್ತೆ ನಿರ್ಬಂಧಿಸುವುದು ಸಂವಿಧಾನದ 19ನೇ ವಿಧಿಯಡಿ ದೊರೆತಿರುವ ಸಂಚಾರ ಹಕ್ಕಿನ ಉಲ್ಲಂಘನೆಯಾಗಲಿದೆ. ರೈತರು ಇತರರ ಮುಲಭೂತ ಹಕ್ಕನ್ನು ಉಲ್ಲಂಘಿಸುವಂತಿಲ್ಲ. ಆರು ತಿಂಗಳ ಹೋರಾಟಕ್ಕೆ ಸಿದ್ಧವಾಗಿರುವುದಾಗಿ ರೈತರು ಹೇಳುತ್ತಿದ್ದಾರೆ. ನಗರಕ್ಕೆ ಸೇರ್ಪಡೆಗೊಳ್ಳುವ ಎಲ್ಲಾ ರಸ್ತೆಗಳನ್ನೂ ನಿರ್ಬಂಧಿಸಲಾಗದು. ಇದು ಯುದ್ಧದ ಸಂದರ್ಭದಲ್ಲಿ ಮಾತ್ರ ನಡೆಯುತ್ತದೆ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು.

 • ಅಪಾರ ಪ್ರಮಾಣದಲ್ಲಿ ಸೇರಿರುವ ಯಾರೂ ಮಾಸ್ಕ್‌ ಧರಿಸಿಲ್ಲ. ಇದರಿಂದ ಕೋವಿಡ್‌ ವ್ಯಾಪಿಸಲಿದ್ದು, ಪ್ರತಿಭಟನಾನಿರತರು ತಮ್ಮ ಊರುಗಳಿಗೆ ಮರಳಿದಾಗ ಕೋವಿಡ್‌ ಮತ್ತಷ್ಟು ಹೆಚ್ಚಲಿದೆ.

 • ಜಾರಿಗೊಳಿಸಿರುವ ಕಾನೂನುಗಳನ್ನು ತಕ್ಷಣಕ್ಕೆ ರದ್ದುಗೊಳಿಸುವಂತೆ ರೈತರು ಕೋರುತ್ತಿದ್ದಾರೆ. ಅದು ಆಗುತ್ತದೋ ಇಲ್ಲವೋ ಹೇಳಿ ಎಂದೆನ್ನುತ್ತಿದ್ದಾರೆ. ಪ್ರತಿಯೊಂದನ್ನು ಕೂಲಂಕಷವಾಗಿ ಅವರು ಕುಳಿತು ಚರ್ಚಿಸಬೇಕು.

 • ಯಾರಾದರೊಬ್ಬರು ಬಿಕ್ಕಟ್ಟನ್ನು ಪರಿಹರಿಸಬೇಕು. ಸಮಿತಿ ಇದನ್ನು ನಿರ್ಣಯಿಸುವ ಬದಲಿಗೆ ಪಾಂಡಿತ್ಯಪೂರ್ಣವಾದ ವ್ಯಕ್ತಿಗಳು ಚರ್ಚೆಯ ಮುಂದಾಳತ್ವ ವಹಿಸಲಿ. ರೈತರ ಆತಂಕಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ನಮ್ಮ ಬಳಿ ಪರಿಹಾರವಿದೆ. ಇದನ್ನು ನಾವು ಲಿಖಿತವಾಗಿ ನೀಡಿದ್ದೇವೆ. ಒಟ್ಟಾಗಿ ಕುಳಿತು ಸಮಸ್ಯೆ ಬಗೆಹರಿಸಬೇಕೆ ವಿನಾ, ಹೌದು ಅಥವಾ ಇಲ್ಲ ಎಂದಷ್ಟೇ ಹೇಳಿ ಎನ್ನುವ ವಿಧಾನ ಅನುಸರಿಸಲಾಗದು ಎಂದು ತುಷಾರ್‌ ಮೆಹ್ತಾ ಹೇಳಿದ್ದಾರೆ.

ಪ್ರತಿಭಟನೆ ಅಹಿಂಸಾತ್ಮಕವಾಗಿದ್ದರೆ ಅದಕ್ಕೆ ಅನುಮತಿ ನೀಡಬಹುದು: ಸುಪ್ರೀಂ ಕೋರ್ಟ್‌

 • ಯಾವುದೇ ಆಸ್ತಿ-ಪಾಸ್ತಿಗೆ ನಷ್ಟ ಮಾಡದೇ ಬದುಕಿಗೆ ಗಂಡಾಂತರ ಉಂಟು ಮಾಡದ ಹೊರತು ಪ್ರತಿಭಟನೆಯು ಸಂವಿಧಾನಾತ್ಮಕ ಹಕ್ಕಾಗಿದೆ. ಅಹಿಂಸಾತ್ಮಕ ಹೋರಾಟದ ಕುರಿತು ನಾವು ಬೇರೊಬ್ಬರಿಂದ ಕಲಿಯುವಂಥದ್ದೇನೂ ಇಲ್ಲ. ಪ್ರತಿಭಟನೆಯ ಉದ್ದೇಶಗಳು ಸ್ಪಷ್ಟವಾಗಿದ್ದರೆ ಅದನ್ನು ಈಡೇರಿಸುವ ಪ್ರಯತ್ನಗಳನ್ನು ಸುಗಮಗೊಳಿಸಲು ಸುಪ್ರೀಂ ಕೋರ್ಟ್‌ ಮುಂದಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಹೇಳಿದ್ದಾರೆ.

 • ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕಿನ ಭಾಗ. ವಾಸ್ತವದಲ್ಲಿ ಅದು ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟಿರುತ್ತದೆ. ಈ ಹಂತದಲ್ಲಿ ರೈತರ ಪ್ರತಿಭಟನೆಯನ್ನು ಯಾವುದೇ ಅಡೆತಡೆಯಿಲ್ಲದೆ ಮತ್ತು ಯಾವುದೇ ಶಾಂತಿಗೆ ಭಂಗ ತರದೇ ಪ್ರತಿಭಟನಾಕಾರರು ನಡೆಸಬಹುದಾಗಿದ್ದು, ಪೊಲೀಸರು ಅದಕ್ಕೆ ಸಹಕಾರ ಮುಂದುವರಿಸಬೇಕು ಎಂದು ಅವರು ವಿಚಾರಣೆ ವೇಳೆ ಹೇಳಿದರು.

ಸಮಿತಿಯ ರಚನೆ

 • ಹಲವು ಸದಸ್ಯರನ್ನು ಒಳಗೊಂಡ ಸ್ವತಂತ್ರ ಸಮಿತಿಯನ್ನು ನಾವು ರಚಿಸಲಿದ್ದೇವೆ. ಸಮಿತಿಯು ಉಭಯಪಕ್ಷಗಳ ವಾದಗಳನ್ನೂ ಆಲಿಸಲಿದೆ. ಅಲ್ಲಿಯವರೆಗೆ ಪ್ರತಿಭಟನೆಯು ಅಹಿಂಸಾತ್ಮಕವಾಗಿ ನಡೆಯಲಿ. ಭಾರತೀಯ ಕಿಸಾನ್‌ ಯೂನಿಯನ್‌ ಮತ್ತು ಇತರರ ಪರವಾಗಿ ಸಮಿತಿಯಲ್ಲಿ ಪಿ ಸಾಯಿನಾಥ್‌ ಭಾಗವಹಿಸಬಹುದು ಎಂದು ಪರಿಹಾರ ಸೂಚಿಸಿದ ಸಿಜೆಐ ಎಸ್‌ ಎ ಬೊಬ್ಡೆ.

 • ರೈತರು ಕೇಂದ್ರ ಸರ್ಕಾರದ ವಾದ ಒಪ್ಪಿಕೊಳ್ಳುವುದಿಲ್ಲ ಎಂಬುದು ನಮ್ಮ ಅಭಿಮತ. ರೈತರೊಂದಿಗಿನ ನಿಮ್ಮ (ಸರ್ಕಾರ) ಮಾತುಕತೆಯು ಫಲಪ್ರದವಾಗಿಲ್ಲ.

 • ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಹೋರಾಟ ಬಿಕ್ಕಟ್ಟನ್ನು ಬಗೆಹರಿಸುವುದು ಮತ್ತು ನ್ಯಾಯದಾನದ ದೃಷ್ಟಿಯಿಂದ ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ವ್ಯಕ್ತಿಗಳು ಹಾಗೂ ಕೃಷಿ ಕ್ಷೇತ್ರದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಪರಿಹಾರ ಕಂಡುಕೊಳ್ಳಲು ನಾವು ಬಯಸಿದ್ದೇವೆ. ಎಲ್ಲರ ವಾದವನ್ನು ಆಲಿಸದೇ ಅದು ಸಾಧ್ಯವಿಲ್ಲ ಎಂದು ಹೇಳಿದ ಪೀಠ.

ಕಾನೂನುಗಳನ್ನು ನೀವು ಅಮಾನತಿನಲ್ಲಿ ಇಡಬಹುದೇ?

 • ಸದರಿ ಪ್ರಕರಣದ ವಿಚಾರಣೆ ನಡೆಸಿ, ನಿರ್ಧಾರ ಕೈಗೊಳ್ಳುವವರೆಗೆ ನೀವು ಪ್ರಶ್ನಾರ್ಹವಾದ ಕಾನೂನುಗಳನ್ನು ಜಾರಿಗೊಳಿಸದೇ ಅಮಾನತಿನಲ್ಲಿ ಇಡುವ ಸಂಬಂಧ ನ್ಯಾಯಾಲಯಕ್ಕೆ ಭರವಸೆ ನೀಡುವಿರೇ? ಎಂದು ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರನ್ನು ನ್ಯಾಯಾಲಯ ಪ್ರಶ್ನಿಸಿತು.

 • ಇದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್‌ ಅವರು “ಅದಾಗದು. ಹಾಗೆ ಮಾಡಿದರೆ ರೈತರು ಚರ್ಚೆಗೆ ಬರುವ ಹಾಗಿಲ್ಲ” ಎಂದರು.

 • ಅಟಾರ್ನಿಯವರ ಪ್ರತಿಕ್ರಿಯೆಯಿಂದ ಸಂತುಷ್ಟಗೊಳ್ಳದ ನ್ಯಾಯಾಲಯವು “ಸಂವಾದವನ್ನು ಮುಂದುವರಿಸಬೇಕು” ಎಂದಿತು.

Related Stories

No stories found.
Kannada Bar & Bench
kannada.barandbench.com