
ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಟಿ) ಪಾತಕಿಗಳ ವಿರುದ್ಧ 288 ಕ್ರಿಮಿನಲ್ ವಿಚಾರಣೆಗಳು ಬಾಕಿ ಇರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣಗಳಲ್ಲಿ ಆರೋಪ ನಿಗದಿ ಮತ್ತು ಸಾಕ್ಷ್ಯಗಳ ವಿಚಾರಣೆ ಆರಂಭದ ನಡುವೆ ಗಮನಾರ್ಹ ವಿಳಂಬವಿದೆ ಎಂದು ಅದು ಹೇಳಿದೆ [ಮಹೇಶ್ ಖತ್ರಿ ಭೋಲಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಈಗಾಗಲೇ 55 ಪ್ರಕರಣಗಳು ದಾಖಲಾಗಿ ಘೋರ ಆರೋಪಿ ಎಂದು ಬಣ್ಣಿತನಾದ ವ್ಯಕ್ತಿಯೊಬ್ಬನ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಐಪಿಸಿ ಸೆಕ್ಷನ್ 307 ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತ ಜಾಮೀನು ಕೋರಿದ್ದ.
ದಾಖಲೆಯಲ್ಲಿ ತನ್ನ ಮುಂದಿರಿಸಲಾದ ಮತ್ತೊಂದು ಅಫಿಡವಿಟ್ ಗಮನಿಸಿದ ನ್ಯಾ. ಕಾಂತ್ ಅವರು ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಾತಕಿಗಳಿಗೆ ಸಂಬಂಧಿಸಿದ 288 ಪ್ರಕರಣಗಳು ಬಾಕಿ ಉಳಿದಿದ್ದು 180 ಪ್ರಕರಣಗಳಲ್ಲಿ ಇನ್ನೂ ಆರೋಪ ನಿಗದಿಯಾಗಿಲ್ಲ ಎಂದರು.
ಶೇ 25ರಷ್ಟು ಪ್ರಕರಣಗಳಲ್ಲಷ್ಟೇ ಪ್ರಾಸಿಕ್ಯೂಷನ್ ಸಾಕ್ಷ್ಯ ವಿಚಾರಣೆಯ ಆರಂಭಿಕ ಹಂತ ತಲುಪಲಾಗಿದೆ. ಆರೋಪ ನಿಗದಿಗೂ ಮತ್ತು ಸಾಕ್ಷ್ಯ ವಿಚಾರಣೆಯ ಆರಂಭಕ್ಕೂ ನಡುವೆ ನಡುವೆ 3-4 ವರ್ಷಗಳ ಅಂತರವಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಮಾರ್ಮಿಕವಾಗಿ ನುಡಿಯಿತು.
ಇಷ್ಟೊಂದು ಪ್ರಮಾಣದ ವಿಚಾರಣೆ ಬಾಕಿ ಇರುವುದರಿಂದ ತುರ್ತು ರಚನಾತ್ಮಕ ಸುಧಾರಣೆ ಅಗತ್ಯವಿದೆ ಎಂದ ನ್ಯಾಯಾಲಯ ಕೇಂದ್ರ ಸರ್ಕಾರ ಮತ್ತು ಸಾಲಿಸಿಟರ್ ಜನರಲ್ ಅವರಿಗೆ ನೋಟಿಸ್ ನೀಡಿತು.
ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ತ್ವರಿತ ವಿಚಾರಣೆಗೆ ಹೈಕೋರ್ಟ್ ಆಕ್ಷೇಪಿಸುವುದಿಲ್ಲವಾದರೂ ಕೇಂದ್ರ ಮತ್ತು ದೆಹಲಿ ಸರ್ಕಾರ ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಮುಂದಾದರೆ ಮಾತ್ರ ಅದು ಸಾಕಾರಗೊಳ್ಳುತ್ತದೆ ಎಂದು ಅದು ಹೇಳಿತು.
ಪಾತಕಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಕಾಲಿಕ ನ್ಯಾಯದಾನಕ್ಕಾಗಿ ತಡೆರಹಿತ ವಿಚಾರಣೆ ನಡೆಯಬೇಕಾಗುತ್ತದೆ. ಎಂದು ಪೀಠ ಹೇಳಿತು. ನ್ಯಾ. ಕಾಂತ್ ಅವರು ದೆಹಲಿ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಗಮನಸೆಳೆದರು.
ಗಂಭೀರ ಪ್ರಕರಣಗಳನ್ನು ನಿಭಾಯಿಸಲು ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿರುವ ಆಂಧ್ರಪ್ರದೇಶದ ಉದಾಹರಣೆಯನ್ನು ಅದು ಇದೇ ವೇಳೆ ಪ್ರಸ್ತಾಪಿಸಿತು. ನಾಲ್ಕು ವಾರಗಳ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.