ರಾಜಸ್ಥಾನದ ಹವಾಮಾನ ಬೆಂಗಳೂರಿಗಿಂತ ಭಿನ್ನ: ವಕೀಲರ ಬೇಸಿಗೆ ವಸ್ತ್ರ ಸಂಹಿತೆ ಸಡಿಲಿಕೆ ಕುರಿತಂತೆ ಸುಪ್ರೀಂ ಪ್ರತಿಕ್ರಿಯೆ

ದೇಶದಾದ್ಯಂತ ಹವಾಮಾನ ಪರಿಸ್ಥಿತಿಗಳು ಬದಲಾಗುವುದರಿಂದ ವಸ್ತ್ರ ಸಂಹಿತೆ ಕುರಿತಂತೆ ಭಾರತೀಯ ವಕೀಲರ ಪರಿಷತ್ತು ಮತ್ತು ಕೇಂದ್ರ ಸರ್ಕಾರ ನಿರ್ಧರಿಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.
Lawyers
Lawyers
Published on

ಬೇಸಿಗೆ ಕಾಲದಲ್ಲಿ ದೇಶಾದ್ಯಂತ ವಕೀಲರ ವಸ್ತ್ರ ಸಂಹಿತೆ ಸಡಿಲಿಕೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಹಿಂಪಡೆಯಲು ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. [ಶೈಲೇಂದ್ರ ತ್ರಿಪಾಠಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .

ದೇಶದಾದ್ಯಂತ ಹವಾಮಾನ ಪರಿಸ್ಥಿತಿಗಳು ಬದಲಾಗುವುದರಿಂದ ಈ ಕುರಿತಂತೆ ಭಾರತೀಯ ವಕೀಲರ ಪರಿಷತ್ತು ಮತ್ತು ಕೇಂದ್ರ ಸರ್ಕಾರ ನಿರ್ಧರಿಸುವುದು ಸೂಕ್ತ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

Also Read
ಮಹಿಳಾ ನ್ಯಾಯಾಂಗ ಅಧಿಕಾರಿಗಳ ವಸ್ತ್ರ ಸಂಹಿತೆ ಮಾರ್ಪಡಿಸಿದ ಕೇರಳ ಹೈಕೋರ್ಟ್

ರಾಜಸ್ಥಾನದ ಹವಾಮಾನ ಪರಿಸ್ಥಿತಿಯನ್ನು ಬೆಂಗಳೂರಿಗೆ  ಹೋಲಿಸಲಾಗದು ಎಂದ ಅದು ಭಾರತೀಯ ವಕೀಲರ ಪರಿಷತ್ತು ಇದನ್ನು ನಿರ್ಧರಿಸಬೇಕಿದೆ, ಶಿಷ್ಟಾಚಾರ ಎಂಬುದು ಇರಬೇಕಾಗುತ್ತದೆ ವಕೀಲರು ಸೂಕ್ತ ರೀತಿಯಲ್ಲಿ ಉಡುಪು ಧರಿಸಿ ಬರಬೇಕಾಗುತ್ತದೆ ಎಂದಿತು.   

ಅರ್ಜಿದಾರರಾದ ವಕೀಲ ಶೈಲೇಂದ್ರ ತ್ರಿಪಾಠಿ ಅವರು ಈ ಹಿಂದೆ ಕೂಡ ಇದೇ ಬಗೆಯ ಅರ್ಜಿ ಸಲ್ಲಿಸಿದ್ದರು. 2022 ರಲ್ಲಿ ಬಿಸಿಐಯನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ ಹಿನ್ನೆಲೆಯಲ್ಲಿ ಮನವಿ ಹಿಂಪಡೆದಿದ್ದರು. ಒಂದು ವೇಳೆ ಬಿಸಿಐ ಕ್ರಮ ಕೈಗೊಳ್ಳದಿದ್ದರೆ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಮುಕ್ತ ಅವಕಾಶವಿದೆ ಎಂದು ಪೀಠ ಆಗ ಹೇಳಿತ್ತು.

ಗೌನ್‌ಗಳಿಗೆ ಈಗಾಗಲೇ ವಿನಾಯಿತಿ ನೀಡಲಾಗಿದ್ದರೂ, ಕನಿಷ್ಠ ಗುಣಮಟ್ಟದ ವಸ್ತ್ರ ಸಂಹಿತೆಯನ್ನು ಕಾಯ್ದುಕೊಳ್ಳಬೇಕು ಎಂದು ಇಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಒತ್ತಿ ಹೇಳಿತು.

"ಗೌನ್‌ಗಳಿಗೆ ಈಗಾಗಲೇ ವಿನಾಯಿತಿ ನೀಡಲಾಗಿದೆ. ನೀವು ಏನನ್ನಾದರೂ ಧರಿಸಿರಬೇಕಾಗುತ್ತದೆ. ಕುರ್ತಾ-ಪೈಜಾಮಾ ಅಥವಾ ಶಾರ್ಟ್ಸ್ ಮತ್ತು ಟೀ-ಶರ್ಟ್‌ ಧರಿಸಿ ವಾದಿಸಲಾಗದು. ಸ್ವಲ್ಪ ಶಿಷ್ಟಾಚಾರ ಇರಬೇಕು" ಎಂದು ನ್ಯಾಯಾಲಯ ಹೇಳಿದೆ.

Also Read
ಬೇಸಿಗೆಯಲ್ಲಿ ವಕೀಲರ ವಸ್ತ್ರ ಸಂಹಿತೆ ಸಡಿಲಿಕೆ: ಬಿಸಿಐ ಸಂಪರ್ಕಿಸಲು ಸೂಚಿಸಿದ ಸುಪ್ರೀಂ ಕೋರ್ಟ್‌

ವಕೀಲರಿಗೆ ಸೂಕ್ತವಾದ ಉಡುಗೆ ಯಾವುದು ಎಂದು ನ್ಯಾಯಾಲಯ ಕೇಳಿದಾಗ, ಅರ್ಜಿದಾರರು ಕಪ್ಪು ಕೋಟ್ ಮತ್ತು ಗೌನ್‌ಗೆ ವಿನಾಯಿತಿ ನೀಡಬೇಕು ಅಥವಾ ಬೇರೆ ಯಾವುದಾದರೂ ಬಣ್ಣದ ವಸ್ತ್ರ ಧರಿಸಲು ಅನುಮತಿಸಬೇಕು. ಇದು ಭಾರತೀಯ ಹವಾಮಾನಕ್ಕೆ ವಿಶೇಷವಾಗಿ ದೇಶದ ಉತ್ತರ ಮತ್ತು ಕರಾವಳಿ ಭಾಗಗಳಿಗೆ ಒಗ್ಗದ ವಸಾಹತುಶಾಹಿ ಪಳೆಯುಳಿಕೆ. ಅಂತಹ  ವಸ್ತ್ರ ಸಂಹಿತೆ ಅಸ್ವಸ್ಥತೆಗೆ ಕಾರಣವಾಗುವುದಲ್ಲದೆ ಶುಚಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಹೊರೆ ಉಂಟು ಮಾಡುತ್ತದೆ  ಎಂದು ವಾದಿಸಿದರು.

ಆದರೆ ದೇಶದ ವೈವಿಧ್ಯಮಯ ಹವಾಮಾನ ಪರಿಸ್ಥಿತಿ ಉಲ್ಲೇಖಿಸಿದ ಅದು ಬಿಸಿಐ ಮತ್ತು ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆಯುವಂತೆ ಅರ್ಜಿ ದಾರರಿಗೆ ಸೂಚಿಸಿ ಮನವಿಯನ್ನು ಹಿಂಪಡೆಯಲು ಅನುವಾಗುವಂತೆ ವಜಾಗೊಳಿಸಿತು.

Kannada Bar & Bench
kannada.barandbench.com