ಪ್ರತಿಭಟನಾನಿರತ ರೈತರು ಮತ್ತು ಕೇಂದ್ರದ ನಡುವಿನ ವಿಶ್ವಾಸ ಕೊರತೆಯತ್ತ ಬೆರಳು ಮಾಡಿದ ಸುಪ್ರೀಂ ಕೋರ್ಟ್

ಪಂಜಾಬ್ ಮತ್ತು ಹರಿಯಾಣವನ್ನು ಸಂಪರ್ಕಿಸುವ ಶಂಭು ಗಡಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೀಠದಲ್ಲಿ ನಡೆಯಿತು.
Farmers protest, Delhi-Haryana border, Ghazipur
Farmers protest, Delhi-Haryana border, Ghazipur
Published on

ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮತ್ತೆ ದೆಹಲಿ ಪಾದಯಾತ್ರೆಗೆ ಮುಂದಾಗುತ್ತಿರುವ ರೈತರ ಬೇಡಿಕೆಗಳನ್ನು ಆಲಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಕಿವಿಮಾತು ಹೇಳಿದೆ  [ಹರಿಯಾಣ ಸರ್ಕಾರ ಮತ್ತು ಉದಯ್ ಪ್ರತಾಪ್ ಸಿಂಗ್ ನಡುವಣ ಪ್ರಕರಣ]

ರೈತರು ಮತ್ತಿತರೆ ಭಾಗೀದಾರರೊಂದಿಗೆ ಸಂವಹ ಸಾಧಿಸಿ ಅವರ ಬೇಡಿಕೆಗಳನ್ನು ಆಲಿಸಿ ಸೂಕ್ತ ಪರಿಹಾರ ಸೂಚಿಸಬಲ್ಲಂತಹ ತಜ್ಞರು, ರೈತರು ಹಾಗೂ ಇತರೆ ಭಾಗೀದಾರರನ್ನು ಒಳಗೊಂಡ ಸ್ವತಂತ್ರ ಸಮಿತಿ ರಚನೆ ಕುರಿತಂತೆ ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ಕೇಂದ್ರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್‌ ದತ್ತಾ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ ತಿಳಿಸಿತು.

Also Read
ರೈತರ ಪ್ರತಿಭಟನೆ ವೇಳೆ ಯುವ ಕೃಷಿಕನ ಸಾವು: ನ್ಯಾಯಾಂಗ ತನಿಖೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ

ರೈತರೊಂದಿಗೆ ಸಂವಹನ ಸಾಧಿಸಲು ನೀವು ಕೆಲ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ದೆಹಲಿಗೆ ಏಕೆ ಬರಲು ಬಯಸುತ್ತಾರೆ? ನೀವು ಇಲ್ಲಿಂದ ಮಂತ್ರಿಗಳನ್ನು ಕಳುಹಿಸುತ್ತಿದ್ದು ಅವರ ಉತ್ತಮ ಉದ್ದೇಶದ ಹೊರತಾಗಿಯೂ ವಿಶ್ವಾಸ ಕೊರತೆಯಿದೆ. ನೀವು ಸ್ಥಳೀಯ ಸಮಸ್ಯೆ ನಿರ್ಲಕ್ಷಿಸಿ ಸ್ವಹಿತಾಸಕ್ತಿ ಬಗ್ಗೆ ಮಾತನಾಡುತ್ತೀರಿ ಎಂದು ಅವರು (ರೈತರು) ಭಾವಿಸುತ್ತಾರೆ. ನೀವು ತಟಸ್ಥ ತೀರ್ಪುಗಾರರನ್ನೇಕೆ ಕಳಿಸಬಾರದು?” ಎಂದು ನ್ಯಾಯಾಲಯ ಕೇಳಿತು.

ಸಮಿತಿಯಲ್ಲಿ ಯಾರು ಇರಬೇಕು ಎಂಬ ಕುರಿತು ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ಸೂಚಿಸಬಹುದು ಎಂದು ನ್ಯಾಯಾಲಯ ನುಡಿಯಿತು.

ಪಂಜಾಬ್ ಮತ್ತು ಹರಿಯಾಣವನ್ನು ಸಂಪರ್ಕಿಸುವ ಶಂಭು ಗಡಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೀಠದಲ್ಲಿ ನಡೆಯಿತು. ದೆಹಲಿಯತ್ತ ಪ್ರತಿಭಟನಾಕಾರರು ಸಾಗುವುದನ್ನು ತಡೆಯಲು ಹರಿಯಾಣ ಸರ್ಕಾರ ಗಡಿಯನ್ನು ಮುಚ್ಚಿತ್ತು.

ರಾಜ್ಯ ಸರ್ಕಾರ ಹೆದ್ದಾರಿಯನ್ನು ಅನೇಕ ದಿನಗಳವರೆಗೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನುಡಿಯಿತು. ಇದೇ ವೇಳೆ, ನ್ಯಾ. ಭುಯಾನ್‌ ಅವರು ರೈತರೂ ಸಹ ಜೆಸಿಬಿಯನ್ನಿರಿಸಿಕೊಂಡು ಪ್ರತಿಭಟಿಸಲು ಆಗದು ಎಂದು ಹೇಳಿದರು.

ಈ ವೇಳೆ ಎಸ್‌ಜಿ ಮೆಹ್ತಾ ಅವರು, ಸೂಕ್ಷ್ಮ ವಿಷಯಗಳೊಂದಿಗೆ ವ್ಯವಹರಿಸುವಾಗ ಕಲ್ಯಾಣ ರಾಜ್ಯವೂ ಸಹ ಅಹಿತಕರ ಘಟನೆಗಳನ್ನು ಸಹಿಸಲಾಗದು ಎಂದು ವಾದಿಸಿದರು. 

Also Read
ರೈತರ ಪ್ರತಿಭಟನೆ: ಗಡಿ ಬಂದ್‌, ಅಂತರ್ಜಾಲ ಸ್ಥಗಿತ ವಿರೋಧಿಸಿ ಪಂಜಾಬ್ ಹೈಕೋರ್ಟ್‌ಗೆ ಅರ್ಜಿ

“ಜೆಸಿಬಿಗಳನ್ನು ಯುದ್ಧ ಟ್ಯಾಂಕ್‌ಗಳಾಗಿ ಪರಿವರ್ತಿಸಲಾಗಿದೆ! ಇದನ್ನು ಜವಾಬ್ದಾರಿಯಿಂದಲೇ ಹೇಳುತ್ತಿದ್ದೇನೆ. ಶಸ್ತ್ರಸಸಜ್ಜಿತ ವಾಹನಗಳು ಇರುವ ಬಗ್ಗೆ ನಮ್ಮ ಬಳಿ ಛಾಯಾಚಿತ್ರಗಳಿವೆ ,” ಎಂದು ಅವರು ಹೇಳಿದರು.

ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಗುರ್ಮಿಂದರ್ ಸಿಂಗ್ ಅವರು, ಹರಿಯಾಣ ಸರ್ಕಾರವು ಹೆದ್ದಾರಿಯನ್ನು ನಿಯಂತ್ರಿಸಲು ಅಧಿಕಾರವನ್ನು ಹೊಂದಿದೆಯಾದರೂ ಇದರಿಂದ ಪಂಜಾಬ್‌ನ ಮೇಲೆ ತೀವ್ರ ಆರ್ಥಿಕ ಪರಿಣಾಮಗಳಾಗುತ್ತಿವೆ ಎಂದು ನ್ಯಾಯಾಲಯದ ಗಮನಸೆಳೆದರು. ಈ ಹಂತದಲ್ಲಿ ಸುಪ್ರೀಂ ಕೋರ್ಟ್‌, ಪಂಜಾಬ್‌ ಹಾಗೂ ಹರಿಯಾಣ ರಾಜ್ಯಗಳ ನಡುವೆ ಸಂಘರ್ಷ ಏರ್ಪಡುವುದನ್ನು ತಾನು ಬಯಸುವುದಿಲ್ಲ ಎಂದಿತು. ಅಲ್ಲದೆ ಶಂಭು ಗಡಿ ಪ್ರದೇಶದಲ್ಲಿ ಯಾವುದೇ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಅದು ಎರಡೂ ರಾಜ್ಯಗಳಿಗೆ ಸೂಚಿಸಿತು. 

ಮುಂದುವರೆದು, ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಸಲುವಾಗಿ ಹಂತ ಹಂತವಾಗಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ಪೀಠವು ಆದೇಶಿಸಿತು.

Kannada Bar & Bench
kannada.barandbench.com