ವಕೀಲರು, ದಾವೆದಾರರು, ಪತ್ರಕರ್ತರು ಹಾಗೂ ಇತರರಿಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಉಚಿತ ವೈ-ಫೈ ಸೌಲಭ್ಯ

ವೈ ಫೈ ಸೌಲಭ್ಯವನ್ನು ಶೀಘ್ರವೇ ವಕೀಲೆಯರ ಕೊಠಡಿ ಹಾಗೂ ಮೊದಲ ಹಂತದ ವೈ ಫೈ ಸೌಲಭ್ಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಭಾನುವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ವಕೀಲರು, ದಾವೆದಾರರು, ಪತ್ರಕರ್ತರು ಹಾಗೂ ಇತರರಿಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಉಚಿತ ವೈ-ಫೈ ಸೌಲಭ್ಯ
Published on

ಸುಪ್ರೀಂ ಕೋರ್ಟ್‌ನಲ್ಲಿ ಡಿಜಿಟಲ್‌ ಸೌಕರ್ಯ ಹೆಚ್ಚಿಸುವ ಮಹತ್ವದ ಹೆಜ್ಜೆ ಎಂಬಂತೆ ವಕೀಲರು, ದಾವೆದಾರರು, ಮಾಧ್ಯಮದವರು ಹಾಗೂ ಇತರೆ ಭಾಗೀದಾರರಿಗೆ ಸರ್ವೋಚ್ಚ ನ್ಯಾಯಾಲಯ ಉಚಿತ ವೈ ಫೈ ಸೌಲಭ್ಯ ದೊರೆಯುವಂತೆ ಮಾಡಿದೆ.

ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡುವವರಿಗೆ ಇಂದಿನಿಂದ ಈ ಸೌಲಭ್ಯ ಲಭಿಸಲಿದೆ.

ಯೋಜನೆಯ ಮೊದಲ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯ, ಸಂಖ್ಯೆ 2 ರಿಂದ 5ರವರೆಗೆ ಹಾಗೂ ಕಾರಿಡಾರ್‌ ಮತ್ತು ನ್ಯಾಯಾಲಯ ಮುಂಭಾಗಗಳ ಅಂಗಳ, I ಮತ್ತು IIನೇ ಮಾಧ್ಯಮ ಕೊಠಡಿಗಳು ಹಾಗೂ ಅಂಗಳದ ಮುಂಭಾಗದ ನಿರೀಕ್ಷಣಾ ಕೊಠಡಿಗಳಲ್ಲಿ ಸೌಲಭ್ಯವನ್ನು ಬಳಸಬಹುದಾಗಿದೆ.

ಬಳಕೆದಾರರ ಹೆಸರಾದ SCI_WiFi ಗೆ ಲಾಗ್ ಇನ್ ಆಗುವ ಮೂಲಕ ಸೌಲಭ್ಯ  ಪಡೆಯಬಹುದಾಗಿದೆ. ಬಳಕೆದಾರರು ತನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ನಂತರ ದೊರೆಯುವ ಒಟಿಪಿಯನ್ನು ದೃಢೀಕರಣ ಮತ್ತು ಲಾಗಿನ್‌ಗಾಗಿ ಉಪಯೋಗಿಸಬಹುದಾಗಿದೆ.

ಹಂತ ಹಂತವಾಗಿ ಎಲ್ಲಾ ನ್ಯಾಯಾಲಯ ಕೊಠಡಿಗಳು ಮತ್ತು ಅವುಗಳಿಗೆ ಹೊಂದಿಕೊಂಡ ಸ್ಥಳಗಳು, ವಕೀಲರ I ಮತ್ತು IIನೇ ಗ್ರಂಥಾಲಯಗಳು ಹಾಗೂ ವಕೀಲೆಯರ ಕೊಠಡಿಗಳು ಮತ್ತು ಸಭಾಂಗಣಗಳಿಗೆ ಉಚಿತ ಅಂತರ್ಜಾಲ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com