ಕ್ರಿಮಿನಲ್‌ ಪ್ರಕರಣ ಕುರಿತು ಪೊಲೀಸರಿಂದ ಮಾಧ್ಯಮಗಳಿಗೆ ಮಾಹಿತಿ: ನೀತಿ ರೂಪಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಗಡುವು

ತಾನು ಈ ಹಿಂದೆ ನೀಡಿದ್ದ ನಿರ್ದೇಶನ ಜಾರಿಗೆ ತರಲು ಬಹುತೇಕ ರಾಜ್ಯಗಳು ಮುಂದಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅಮಿಕಸ್ ಕ್ಯೂರಿ ತಯಾರಿಸಿದ ಕೈಪಿಡಿ ಆಧರಿಸಿ ಸೂಕ್ತ ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
Supreme Court, media
Supreme Court, media
Published on

ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಪೊಲೀಸರು ಪಾಲಿಸಬೇಕಾದ ನೀತಿಯನ್ನು ರೂಪಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಮೂರು ತಿಂಗಳ ಗಡುವು ನೀಡಿದೆ [ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರತ್ಯೇಕ ಮಾಧ್ಯಮ ಮಾಹಿತಿ ನೀತಿ ರೂಪಿಸುವಾಗ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರು ಸಿದ್ಧಪಡಿಸಿರುವ ಕೈಪಿಡಿಗಳನ್ನು ರಾಜ್ಯ ಸರ್ಕಾರಗಳು ಬಳಸಿಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎನ್ ಕೆ ಸಿಂಗ್ ಅವರನ್ನೊಳಗೊಂಡ ಪೀಠ ತಿಳಿಸಿದೆ.

Also Read
ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾ.ಮಾಧ್ಯಮ ನಿಷೇಧ: ಆಸ್ಟ್ರೇಲಿಯಾದಂತೆ ಕಾಯಿದೆ ರೂಪಿಸಬೇಕು ಎಂದ ಮದ್ರಾಸ್ ಹೈಕೋರ್ಟ್

ತಾನು ಈ ಹಿಂದೆ ನೀಡಿದ್ದ ನಿರ್ದೇಶನ ಜಾರಿಗೆ ತರಲು ಬಹುತೇಕ ರಾಜ್ಯಗಳು ಮುಂದಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅಮಿಕಸ್ ಕ್ಯೂರಿ ತಯಾರಿಸಿದ ಕೈಪಿಡಿ ಆಧರಿಸಿ ಸೂಕ್ತ ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಪ್ರಕರಣಕ್ಕೆ ಸುದೀರ್ಘ ಹಿನ್ನೆಲೆ ಇದೆ. 1990ರ ದಶಕದ ಕೊನೆಯಲ್ಲಿ, ಮಹಾರಾಷ್ಟ್ರದಲ್ಲಿ ನಡೆದಿದೆ ಎನ್ನಲಾದ ನಕಲಿ ಪೊಲೀಸ್ ಎನ್‌ಕೌಂಟರ್‌ಗಳನ್ನು ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಅರ್ಜಿ ಸಲ್ಲಿಸಿತ್ತು.

2014ರಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ಎನ್‌ಕೌಂಟರ್‌ಗಳ ಕುರಿತು ಮಾರ್ಗಸೂಚಿಗಳನ್ನು ನಿಗದಿಪಡಿಸುವ ವಿವರವಾದ ತೀರ್ಪನ್ನು ನೀಡಿತಾದರೂ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪೊಲೀಸ್‌ ಇಲಾಖೆ ನೀಡುವ ವಿವರಣೆ ಹೇಗಿರಬೇಕು. ವರದಿಗಾರಿಕೆ ʼಮಾಧ್ಯಮ ವಿಚಾರಣೆʼಯಾಗಿ ಬದಲಾಗದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ವಿಚಾರ ಹಾಗೆಯೇ ಉಳಿದಿತ್ತು.

2023ರ ಸೆಪ್ಟೆಂಬರ್‌ನಲ್ಲಿ ಈ ಕುರಿತ ವಿಚಾರಣೆ ನಡೆಸುವ ವೇಳೆ, ಸುಪ್ರೀಂ ಕೋರ್ಟ್ ಪೊಲೀಸ್ ಇಲಾಖೆಯ ಮಾಧ್ಯಮ ವಿವರಣೆಗಳಿಗೆ ಸಂಬಂಧಿಸಿದ ಸಮಗ್ರ ಕೈಪಿಡಿಯನ್ನು ತಯಾರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಮಾರ್ಗಸೂಚಿಗಳು ಹತ್ತು ವರ್ಷಕ್ಕೂ ಹೆಚ್ಚು ಹಳೆಯವುಗಳಾಗಿದ್ದು, ಮುದ್ರಣ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳು ತೀವ್ರ ಸ್ವರೂಪದಲ್ಲಿ ಬದಲಾಗಿರುವುದರಿಂದ ಅವು ಪ್ರಸ್ತುತವಾಗಿಲ್ಲ ಎಂದು ಪೀಠ ಹೇಳಿತ್ತು.

ಪತ್ರಿಕಾ ಸ್ವಾತಂತ್ರ್ಯವು ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿದ್ದರೂ, ಆರೋಪಿಗಳು ನ್ಯಾಯಯುತ ತನಿಖೆ ಮತ್ತು ನಿರ್ದೋಷಿತನದ ಊಹೆಗೆ ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಒತ್ತಿ ಹೇಳಿತ್ತು. ಮಾಧ್ಯಮ ವರದಿಗಳು ಆರೋಪಿಗಳ ಪ್ರತಿಷ್ಠೆಗೆ ಹಾನಿ ಉಂಟುಮಾಡುವ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿತಗೊಳಿಸುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಕೆ ನೀಡಿತ್ತು.

Also Read
ಅತಿ ವಿಳಂಬಿತ ಪ್ರಕರಣಗಳಲ್ಲಿ ಮಾತ್ರ ತನಿಖೆಗೆ ಗಡುವು ವಿಧಿಸಬೇಕು: ಸುಪ್ರೀಂ ಕೋರ್ಟ್

ನಂತರ ಪ್ರಕರಣದ ಅಮಿಕಸ್‌ ಕ್ಯೂರಿಯಾಗಿ ಗೋಪಾಲ್‌ ಶಂಕರ್‌ನಾರಾಯಣನ್‌ ಅವರನ್ನು ನೇಮಕ ಮಾಡಲಾಗಿತ್ತು. ಅವರು ಕೇಂದ್ರ ಸರ್ಕಾರದ ಅಭಿಪ್ರಾಯಗಳು ಮತ್ತು ಅಂತಾರಾಷ್ಟ್ರೀಯ ಪದ್ಧತಿಗಳನ್ನು ಒಳಗೊಂಡ “ಪೊಲೀಸ್ ಮಾಧ್ಯಮ ವಿವರಣೆ ಕೈಪಿಡಿ ತಯಾರಿಸಿದ್ದರು.

ಜನವರಿ 15ರಂದು ನಡೆದ ವಿಚಾರಣೆಯಲ್ಲಿ, ಅಮಿಕಸ್ ಕ್ಯೂರಿ ಮಾಡಿದ ಕಾರ್ಯವನ್ನು ಪ್ರಶಂಸಿಸಿದ ನ್ಯಾಯಾಲಯ, ರಾಜ್ಯಗಳಿಂದ ಸಮರ್ಪಕ ಪ್ರತಿಕ್ರಿಯೆ ಇಲ್ಲದಿರುವುದನ್ನು ಗಮನಿಸಿತು. ಪ್ರಕರಣವನ್ನು ಇನ್ನೂ ಬಾಕಿ ಇಡಲಾಗದು ಎಂದು ಸ್ಪಷ್ಟಪಡಿಸಿದ ಪೀಠ, ಶಂಕರನಾರಾಯಣನ್ ತಯಾರಿಸಿದ ಕೈಪಿಡಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರಗಳು ತಮ್ಮದೇ ಮಾಧ್ಯಮ ವಿವರಣೆ ನೀತಿಗಳನ್ನು ರೂಪಿಸಬೇಕೆಂದು ನಿರ್ದೇಶನ ನೀಡಿದೆ. ಜೊತೆಗೆ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸುವಂತೆ ಅದು ಆದೇಶಿಸಿದೆ. 

Kannada Bar & Bench
kannada.barandbench.com